ಮಡಿಕೇರಿ: ಇಲ್ಲಿನ ಸುಂಟಿಕೊಪ್ಪದ ಪನ್ಯ ಗ್ರಾಮದ ಮಾರಿಗುಡಿ ಬಳಿಯ ಕಾಫಿ ತೋಟದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತ ದೇಹವು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಸುಂಟಿಕೊಪ್ಪ ಮಾದಾಪುರ ರಸ್ತೆಯ ಪನ್ಯದಲ್ಲಿರುವ ಸಂದೇಶ್ ಎಂಬವರಿಗೆ ಸೇರಿದ ಮಾರಿಗುಡಿಯ ಸಮೀಪದ ಕಾಫಿ ತೋಟದಲ್ಲಿ ಅಂದಾಜು 45 ರಿಂದ 50 ವಯಸ್ಸಿನ ಅಪರಿಚಿತ ಪುರುಷನ ಮೃತದೇಹದ ಅಂಗಾಂಗಳು ಮಂಗಳವಾರ ಪತ್ತೆಯಾಗಿವೆ.
ಈ ಕುರಿತು ತೋಟದ ಮಾಲೀಕರು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ತಿಳಿಸಿದ ಮೇರೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ಕಳೆದ 4 ದಿನಗಳ ಹಿಂದೆ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಸುಟ್ಟ ಮೃತದೇಹದ ಒಂದು ಕಾಲು ಹಾಗೂ ಇತರೆ ಭಾಗಗಳು ಪತ್ತೆಯಾಗಿವೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ರಾಮರಾಜನ್, ಡಿವೈಎಸ್‌ಪಿ ಗಂಗಾಧರಪ್ಪ, ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.