ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಗಾಳಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಗಾಳಿಗೆ ಮರ ಬಿದ್ದು ಬೆಳೆಗಾರನೊಬ್ಬ ಸಾವಿಗೀಡಾಗಿರುವ ಘಟನೆ ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ ಮಾಲ್ದಾರೆಯಲ್ಲಿ ನಡೆದಿದೆ.
ಮಾಲ್ದಾರೆ ಗ್ರಾಮದ ಜನತಾ ಕಾಲೋನಿಯ ನಿವಾಸಿ ಬೆಳೆಗಾರ ಹಾಗೂ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಪೊನ್ನಚಂಡ ಬೆಳ್ಳಿಯಪ್ಪ 64 (ವಿಷ್ಣು) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ.
ಮಾಲ್ದಾರೆ ಗ್ರಾಮದ ಬೆಳ್ಳಿಯಪ್ಪ ಎಂಬುವವರು ಮನೆಯಂಗಳದಲ್ಲಿ ನಿಂತಿದ್ದ ಸಂದರ್ಭದಲ್ಲಿ ಭಾರಿ ಗಾಳಿಗೆ ಮನೆಯ ಸಮೀಪವೆ ಇದ್ದ ಮಾವಿನ ಮರದ ಕೊಂಬೆ ಮುರಿದು ಬಿದ್ದಿದೆ.
ಪರಿಣಾಮ ಬೆಳ್ಳಿಯಪ್ಪ ತಲೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾದ ಹಿನ್ನೆಲೆಯಲ್ಲಿ ಅವರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳೆಗಾರ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ನವೀನ್ ಡಿಸೋಜ





