ಕೊಡಗು: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಅಂಗನವಾಡಿ, ಎಲ್ಲಾ ಶಾಲೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮಂಗಳವಾರ(ಜು.16) ರಜೆ ಘೋಷಿಸಲಾಗಿದೆ. ಹಾಗೂ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶರಾದ ರಂಗಧಾಮಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜು ಹಾಗೂ ಪದವಿಪೂರ್ವ ಕಾಲೇಜಿನ ಉಪನಿರ್ದೇಶಕರಾದ ಮಂಜುಳಾ ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸೋಮವಾರದಿಂದಲೇ ವಿಪರೀತ ಮಳೆಯಾಗುತ್ತಿದ್ದು, ಎಲ್ಲಿಯೂ ಮಳೆ ನಿಂತಿಲ್ಲ. ಮಳೆ ವಿಕೋಪಕ್ಕೆ ತಿರುಗುವ ಎಲ್ಲಾ ಮುನ್ಸೂಚನೆಗಳು ಕಂಡುಬಂದ ಹಿನ್ನೆಲಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಧಾರಗಳನ್ನು ಕೈಗೊಂಡಿದೆ.
ಭಾಗಮಂಡಲದಲ್ಲಿ ಒಂದೇ ದಿನ 100-150 ಮಿಮೀ ಮಳೆಯಾಗಿದ್ದು, ನದಿ ತೀರದ ಪ್ರದೇಶಗಳಲ್ಲಿನ ಗ್ರಾಮದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಭಾಗಮಂಡಲದ ತ್ರಿವೇಣಿ ಸಂಗಮ ಭಾಗಶಃ ಮುಳುಗಡೆಯಾಗಿದೆ. ಇತ್ತ ಹಾರಂಗಿ ಜಲಾಶಯ ಕೂಡಾ ಭರ್ತಿಯಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಬೆನ್ನಲ್ಲೇ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ, ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.