Mysore
19
overcast clouds
Light
Dark

ಸಂಬಳ ಪಾವತಿಗೆ ಆಗ್ರಹಿಸಿ ದಿಢೀರ್‌ ಪ್ರತಿಭಟನೆ ನಡೆಸಿದ ಕೆಎಸ್‌ಆರ್‌ಟಿಸಿ ಚಾಲಕರು

ಮಡಿಕೇರಿ: ಸರಿಯಾಗಿ ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿ ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿಯ 48 ಹೊರಗುತ್ತಿಗೆ ಚಾಲಕರು ದಿಢೀರ್‌ ಪ್ರತಿಭಟನೆ ನಡೆಸಿದರು.

ಇಂದು ಬೆಳಿಗ್ಗೆಯೇ ಮಡಿಕೇರಿ ಬಸ್‌ ನಿಲ್ದಾಣದಲ್ಲಿ ಕರ್ತವ್ಯ ಸ್ಥಗಿತಗೊಳಿಸಿದ ಚಾಲಕರು, ನಮಗೆ ಸಂಬಳ ಸರಿಯಾಗಿ ಆಗುತ್ತಿಲ್ಲ. ಇದರಿಂದ ಜೀವನ ನಡೆಸಲು ಕಷ್ಟವಾಗಿದೆ. ಇದನ್ನೇ ನಂಬಿಕೊಂಡಿರುವ ನಾವು ಸಂಬಳಕ್ಕಾಗಿ ಕಾಯುತ್ತಾ ಕುಳಿತಿರುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಚಾಲಕರು, ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು.

ಈ ಹಿಂದೆ ಇದ್ದ ಏಜೆನ್ಸಿ ಪ್ರತಿ ತಿಂಗಳು 23 ಸಾವಿರ ರೂ ಸಂಬಳ ನೀಡುತ್ತಿತ್ತು. ಆದರೆ ಈ ಏಜೆನ್ಸಿ ಬದಲಾಗಿದ್ದು, ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ 13 ರಿಂದ 14 ಸಾವಿರ ರೂ ಪಾವತಿಸುತ್ತಿದೆ.

ನಾವು ಒತ್ತಾಯ ಮಾಡಿದ ಬಳಿಕ ನಿನ್ನೆ ಅರ್ಧ ಸಂಬಳ ಪಾವತಿಸಿದ್ದಾರೆ. ಪೂರ್ಣ ಪ್ರಮಾಣದ ವೇತನ ಹಾಕುವವರೆಗೂ ಬಸ್ಸು ಸಂಚಾರ ಆರಂಭ ಮಾಡುವುದಿಲ್ಲ ಎಂದು ಚಾಲಕರೆಲ್ಲಾ ಪಟ್ಟು ಹಿಡಿದ ಘಟನೆಯೂ ನಡೆಯಿತು.

ದಿಢೀರ್‌ ಪ್ರತಿಭಟನೆಯಿಂದ ಕೊಡಗು ಜಿಲ್ಲೆಯ ಹಲವಾರು ಮಾರ್ಗಗಳಲ್ಲಿ ಸರ್ಕಾರಿ ಬಸ್ ಸಂಚಾರ ವ್ಯತ್ಯಯಗೊಂಡು, ಗ್ರಾಮೀಣ ಭಾಗದಲ ಜನರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಯಿತು.