ಫಲಿಸದ ಪ್ರಾರ್ಥನೆ: ಗಂಭೀರವಾಗಿ ಗಾಯಗೊಂಡಿದ್ದ ಕೊಡಗು ಮೂಲದ ಯೋಧ ಕೊನೆಯುಸಿರು
ಮಡಿಕೇರಿ: ಜಮ್ಮು ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕೊಡಗು ಮೂಲಕ ಯೋಧ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸೋಮವಾರಪೇಟೆ ಸಮೀಪದ ಆಲೂರು-ಸಿದ್ದಾಪುರದ ಮಾಲಂಬಿ ಗ್ರಾಮದ ಯೋಧ ಪಿ.ಪಿ.ದಿವಿನ್(೨೮) ಮೃತ ಸೈನಿಕ. ಜಮ್ಮು ಕಾಶ್ಮೀರದ ಪೂಂಚ್ ಬಳಿ ಕಳೆದ ಬುಧವಾರ ಬೆಳಗಿನ ಜಾವ ಭಾರತೀಯ ಸೇನೆಯ ವಾಹನ ಪ್ರಪಾತಕ್ಕೆ ಉರುಳಿದ್ದು, ವಾಹನದಲ್ಲಿದ್ದ ೧೦ ಮಂದಿ ಯೋಧರ ಪೈಕಿ ಕರ್ನಾಟಕದ ಮೂವರು ಮತ್ತು ಮಹಾರಾಷ್ಟ್ರದ ಇಬ್ಬರು ಮೃತಪಟ್ಟಿದ್ದರು.
ವಾಹನ ಚಾಲಕ ಸೇರಿದಂತೆ ಐವರು ಯೋಧರ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿ ಜಮ್ಮುವಿನ ಉದಮಪುರ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಿವಿನ್ ತಾಯಿ ಜಯ ಕೂಡ ಆಸ್ಪತ್ರೆ ತಲುಪಿದ್ದರು. ಅಮ್ಮನ ಕರೆಗೆ ದಿವಿನ್ ಸ್ಪಂದಿಸಿದ್ದರು ಎಂದು ಹೇಳಲಾಗಿತ್ತು. ಆದರೆ, ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನಲೆ ಭಾನುವಾರ ರಾತ್ರಿ ದಿವಿನ್ ಕೊನೆಯುಸಿರೆಳೆದಿದ್ದಾರೆ.
ಮಾಲಂಬಿ ಗ್ರಾಮದ ಪಳಂಗೋಟು ಪ್ರಕಾಶ್ ಮತ್ತು ಜಯ ದಂಪತಿಯ ಏಕೈಕ ಪುತ್ರ ದಿವಿನ್ ೧೦ ವರ್ಷಗಳ ಹಿಂದೆ ಭಾರತೀಯ ಭೂ ಸೇನೆಗೆ ಸೇರಿದ್ದರು. ದಿವಿನ್ ತಂದೆ ಪ್ರಕಾಶ್ ೨ ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಸಾಮ್ರಾಟ್ ರಿಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಿನ್ ಬುಧವಾರ ಬೆಳಗಿನ ಜಾವ ಸೇನೆಯ ಮರಾಠ ರಿಜಿಮೆಂಟಿಗೆ ಸೇರಿದ ವಾಹನದಲ್ಲಿ ಇತರ ಸೈನಿಕರೊಂದಿಗೆ ಪೆಟ್ರೋಲಿಂಗ್‌ಗೆ ತೆರಳುತ್ತಿದ್ದಾಗ ವಾಹನ ಜಮ್ಮು ಕಾಶ್ಮೀರದ ಪೂಂಚ್ ಬಳಿ ಪ್ರಪಾತಕ್ಕೆ ಉರುಳಿತ್ತು.
ದಿವಿನ್ ಚಿಕಿತ್ಸೆಗೆ ಸಂಬಂಧಿಸಿದಂತೆ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ ಕೂಡ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಶಿವಮೊಗ್ಗ ಮೂಲದ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದರು. ಆದರೆ, ಈಗ ದಿವಿನ್ ನಿಧನಕ್ಕೆ ಶಾಸಕ ಮಂಥರ್ ಗೌಡ ಕೂಡ ಕಂಬನಿ ಮಿಡಿದಿದ್ದಾರೆ.
ಕೋಟ್:
ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದ ಕೊಡಗಿನ ಹೆಮ್ಮೆಯ ಯೋಧ ದಿವಿನ್‌ರವರ ನಿಧನ ಸುದ್ದಿ ಕಂಬನಿ ತರಿಸಿದೆ. ವೀರ ಯೋಧರೊಬ್ಬರನ್ನು ಈ ನಾಡು ಕಳೆದುಕೊಂಡಿದೆ. ಭಗವಂತನು ದಿವಿನ್‌ರವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲೆಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ.
-ಡಾ.ಮಂಥರ್ ಗೌಡ, ಶಾಸಕ, ಮಡಿಕೇರಿ ವಿಧಾನಸಭಾ ಕ್ಷೇತ್ರ.





