Mysore
13
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುವುದನ್ನು ರೂಢಿಸಿಕೊಳ್ಳಿ: ಎ.ಎಸ್.ಪೊನ್ನಣ್ಣ

ಮಡಿಕೇರಿ: ಸಾರ್ವಜನಿಕರು ದೂರವಾಣಿ ಕರೆ ಮಾಡಿದಾಗ ಅವರಿಗೆ ಸ್ಪಂದಿಸುವ ಗುಣವನ್ನು ರೂಡಿಸಿಕೊಳ್ಳಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕ್ಷೇತ್ರವ್ಯಾಪ್ತಿಯ ವಿರಾಜಪೇಟೆ ಮತ್ತು ಮಡಿಕೇರಿ ತಾಲ್ಲೂಕಿನಾದ್ಯಂತ ಅಧಿಕಾರಿಗಳೊಂದಿಗೆ ಮಳೆಹಾನಿ ಪ್ರದೇಶ ವೀಕ್ಷಣೆ ಮಾಡಿ ಎಮ್ಮೆಮಾಡು ಪಂಚಾಯತ್ ನಲ್ಲಿ ಸಭೆ ನಡೆಸಿ ಮಾತನಾಡಿದ ಸಂಧರ್ಭದಲ್ಲಿ, ಅಲ್ಲಿನ ನಾಗರೀಕರು ಅಧಿಕಾರಿಗಳು ತಮ್ಮ ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಎಂದು ಅಳಲು ತೋಡಿಕೊಂಡಾಗ ಅಸಮಾಧಾನ ಗೊಂಡ ಪೊನ್ನಣ್ಣ ನವರು ಮಳೆಗಾಳಿಗೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ,ವಿದ್ಯುತ್, ಮತ್ತು ನೀರಿನ ವ್ಯವಸ್ಥೆ ಸಹಜವಾಗಿ ಹದಗೆಡುತ್ತದೆ. ಈ ಸಂಧರ್ಭದಲ್ಲಿ ಜನರು ಸಂಬಂದಿಸಿದ ಅಧಿಕಾರಿ, ಸಿಬ್ಬಂದಿಗಳಿಗೆ ಕರೆ ಮಾಡುತ್ತಾರೆ. ಅವರ ಕರೆಯನ್ನು ಸ್ವೀಕರಿಸುವ ಸೌಜನ್ಯ ವಿಲ್ಲದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅತೀ ಗಾಳಿಯಿಂದ ಜಿಲ್ಲೆಯಲ್ಲಿ 2318 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಇವುಗಳನ್ನು ತ್ವರಿತವಾಗಿ ಸರಿಪಡಿಸಲು ಇಲಾಖೆಗೆ ಸೂಚನೆ ನೀಡಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದರು.ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾಗಿರುವ ರಸ್ತೆಗಳ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದು ಎಲ್ಲವನ್ನು ಸರಿಪಡಿಸಲು ಬದ್ದರಿದ್ದೇನೆ ಎಂದು ತಿಳಿಸಿದರು.

2018 ರಲ್ಲಿ ಆಗಷ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಆದ ಅನಾಹುತದ ಬಗ್ಗೆ ಸ್ಮರಿಸಿದ ಪೊನ್ನಣ್ಣ ನವರು ಆಗಷ್ಟ್ ನಲ್ಲಿ ಮಳೆಯಿಂದ ಆಗುವ ಅನಾಹುತಗಳನ್ನು ತಡೆಯಲು ಅಧಿಕಾರಿಗಳ ಜೊತೆಗೆ ಎಲ್ಲಾ ನಾಗರೀಕರು ಸಜ್ಜಾಗಿರಲು ಕರೆ ನೀಡಿದರು.

ಮಡಿಕೇರಿ ತಹಶಿಲ್ದಾರ ಪ್ರವೀಣ್, ಪಿಡಬ್ಲೂಡಿ ಇಂಜಿನಿರ್‌ ಗಳು, ಕಂದಾಯ ಅಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜಾ ಉತ್ತಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ಪಂಚಾಯತ್ ರಾಜ್ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಹೊಸೂರು ಸೂರಜ್,ಕೆಡಿಪಿ ಸದಸ್ಯರಾದ ಬಾಚಿಮಂಡ ಲವ ಚಿಣ್ಣಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಹಂಸ, ಯೂಸುಫ್ ಸೇರಿದಂತೆ ಗ್ರಾಮಸ್ಥರು ಪ್ರಮುಖರು ಉಪಸ್ಥಿತರಿದ್ದರು.

Tags:
error: Content is protected !!