ಸಂಪೂರ್ಣ ಹೂವಿನಿಂದ ಶೃಂಗಾರಗೊಂಡ ಬಸವೇಶ್ವರ ದೇವಾಲಯ…..
ಮಡಿಕೇರಿ: ಪೊನ್ನಂಪೇಟೆಯಲ್ಲಿ ಇಂದು(ಸೆ.7) ಬೆಳಿಗ್ಗೆ ಗಣೇಶನನ್ನು ಪುರದ ಬಸವೇಶ್ವರ ದೇವಸ್ಥಾನಕ್ಕೆ ಗೌರಿ ಕೆರೆಯಿಂದ ವಾಲಗಸಹಿತ ಬರಮಾಡಿಕೊಳ್ಳಲಾಯಿತು.
ದೇವಾಲಯದಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಿ ಪೂಜೆ ನೆರವರಿಸಲಾಯಿತು. ಪೊನಂಪೇಟೆಯ ಇತರ ಒಂಬತ್ತು ಸಮಿತಿಯವರು ಬಸವೇಶ್ವರ ದೇವಾಲಯದಲ್ಲಿ ಇರಿಸಲಾದ ಗಣೇಶ ಮೂರ್ತಿಗಳಿಗೆ ಪೂಜೆ ನೆರವೇರಿಸಿದ ನಂತರ ತಮ್ಮ ತಮ್ಮ ಸ್ಥಳಕ್ಕೆ ಮಂಟಪಗಳ ಮೂಲಕ ಮೆರವಣಿಗೆಯೊಂದಿಗೆ ತೆರಳಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ 9 ಸಮಿತಿಯವರು ಒಟ್ಟಿಗೆ ಸೇರಿ ಬಸವೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿ ವೈಭವಪೂರಿತವಾಗಿ ವಿಗ್ರಹಗಳನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋದ ದೃಶ್ಯ ಮನಮೋಹಕವಾಗಿತ್ತು.
ಬ್ಯಾಂಡ್ ಸೆಟ್, ವಾಲಗ, ಚಂಡೆ ವಾದ್ಯಗಳೊಂದಿಗೆ ಗಣೇಶನನ್ನು ಶುದ್ಧಾ ಭಕ್ತಿಯಿಂದ ಬರಮಾಡಿಕೊಂಡರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಂತೂ ಸಾಂಪ್ರದಾಯಿಕ ಉಡುಗೆ ತೊಟ್ಟು ಗಣೇಶ ಮೂರ್ತಿಯನ್ನು ಮೆರವಣಿಗೆ ನಡೆಸಿ ವಿದ್ಯಾರ್ಥಿಗಳೇ ಚೆಂಡೆ ವಾದ್ಯವನ್ನು ನುಡಿಸುತ ಕಾಲೇಜು ಆವರಣದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.
ಬೆಳಿಗ್ಗೆ ಪೊನ್ನಂಪೇಟೆ ಬಸವೇಶ್ವರ ದೇವಾಲಯದಲ್ಲಿ ಸಾಮೂಹಿಕ ಗಣ ಹೋಮ ಜರುಗಿತು. ದೇವಾಲಯದ ಅಧ್ಯಕ್ಷರಾದ ಕೊಳೇರ ದಯ ಚೆಂಗಪ್ಪ ಮತ್ತು ದೇವಾಲಯದ ಪದಾಧಿಕಾರಿಗಳು, ಸಮಿತಿ ಸದಸ್ಯರು ಸಕಲ ವ್ಯವಸ್ತೆಯನ್ನು ಸಜ್ಜುಗೊಳಿಸಿದರು.
ದೇವಾಲಯದ ಅರ್ಚಕರಾದ ಪಂಚಾಕ್ಷರಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಾಲಯವು ಸಂಪೂರ್ಣವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಒಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ ಈ ಬಾರಿ ಗೌರಿ ಗಣೇಶನನ್ನು ಶುದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಬರ ಮಾಡಿಕೊಂಡಿದ್ದಾರೆ.





