Mysore
15
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಮಡಿಕೇರಿ: ಮುದ್ದಂಡ ಹಾಕಿ ಉತ್ಸವದಲ್ಲಿ ಪರಿಸರ ಜಾಗೃತಿ

ಮಡಿಕೇರಿ: ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಕೊಡವ ಕುಟುಂಬಗಳ ಮುದ್ದಂಡ ಕಪ್‌ ಹಾಕಿ ಉತ್ಸವದಲ್ಲಿ ಕಳೆದ 10 ದಿನಗಳಲ್ಲಿ 2 ಟನ್‌ನಷ್ಟು ತ್ಯಾಜ್ಯ ಸಂಗ್ರಹಿಸಲಾಗಿದೆ. ಶೂನ್ಯ ತ್ಯಾಜ್ಯ ನಿರ್ವಹಣೆಗೆ ಬೆಂಗಳೂರಿನ ವೇದನ್‌ ಟ್ರಸ್ಟ್‌ ಕೈ ಜೋಡಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ, ಹಾಕಿ ಉತ್ಸವದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಯ ನಮ್ಮ ವಿನೂತನ ಪ್ರಯತ್ನ ಇಡೀ ಜಿಲ್ಲೆಗೆ ಮಾದರಿಯಾಗಲಿದೆ. ಇದರಿಂದ ಜನರಲ್ಲಿ ಪರಿಸರದ ಕುರಿತು ಕಾಳಜಿ ಮೂಡುತ್ತಿದೆ ಎಂದರು.

ಮುದ್ದಂಡ ಹಾಕಿ ಉತ್ಸವ ಆರಂಭಗೊಂಡು 10 ದಿನಗಳೇ ಕಳೆದಿದ್ದು, ಈ ಅವಧಿಯಲ್ಲಿ ವೇದನ್ ಟ್ರಸ್ಟ್ ನ ಸ್ವಯಂ ಸೇವಕರ ಮೂಲಕ 2 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಹಾಕಿ ಉತ್ಸವ ಮುಗಿಯುವ ವೇಳೆಗೆ ಸುಮಾರು 10 ಟನ್ ಗೂ ಅಧಿಕ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಬೆಂಗಳೂರಿನ ವೇದನ್ ಟ್ರಸ್ಟ್ ನ ಸದಸ್ಯರು ಹಸಿ ಕಸ ಮತ್ತು ಒಣಕಸ ಬೇರ್ಪಡಿಸಿ ಶೂನ್ಯ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಈ ವೈಜ್ಞಾನಿಕ ರೂಪದ ಕಾರ್ಯನಿರ್ವಹಣೆಯನ್ನು ಮಡಿಕೇರಿ ನಗರಸಭೆ ಅಳವಡಿಸಿಕೊಳ್ಳಬಹುದು ಎಂದು ರಶಿನ್ ಸುಬ್ಬಯ್ಯ ಅಭಿಪ್ರಾಯಪಟ್ಟರು.

ವೇದನ್ ಟ್ರಸ್ಟ್ ನ ಪ್ರಮುಖ ಎಸ್.ಸಿ.ಗಣೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸ್ವಚ್ಛ ಪರಿಸರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಮುದ್ದಂಡ ಹಾಕಿ ಉತ್ಸವದಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ ಎಂದರು.

ಮುದ್ದಂಡ ಕಪ್ ಹಾಕಿ ಉತ್ಸವದ ಕಾರ್ಯದರ್ಶಿ ಆದ್ಯ ಪೊವಣ್ಣ ಮಾತನಾಡಿ, ನಮ್ಮ ಈ ಪ್ರಯತ್ನ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುವ ದೊಡ್ಡ ಕ್ರೀಡೋತ್ಸವ ಮತ್ತು ಸಮಾರಂಭಗಳಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣೆಗೆ ಪ್ರೇರಣೆಯನ್ನು ನೀಡಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಹಾಗೂ ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಉಪಾಧ್ಯಕ್ಷ ಡೀನ್ ಬೋಪಣ್ಣ ಉಪಸ್ಥಿತರಿದ್ದರು.

Tags:
error: Content is protected !!