ಮಡಿಕೇರಿ: ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಹಾಗೂ ಮಟ್ಕಾ ಹಾವಳಿಯನ್ನು ನಿಯಮಾನುಸಾರ ನಿಯಂತ್ರಿಸುವ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪ್ಲೈಯಿಂಗ್ ಸ್ಕ್ವಾಡ್‍ನ ಕಾರ್ಯಾಚರಣೆ ತ್ರೈಮಾಸಿಕ ಸಭೆಯು ಸೋಮವಾರ ನಡೆಯಿತು.
ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾವನ್ನು ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಬೇಕು ಎಂದರು.
ಅಕ್ರಮ ಲಾಟರಿ ಮತ್ತು ಮಟ್ಕಾ ದಂಧೆಗಳು ನಡೆಯುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಸಮಿತಿಯ ಅಧಿಕೃತ ದೂರವಾಣಿ ಸಂಖ್ಯೆ 08272-228678 ಗೆ ಮಾಹಿತಿ ನೀಡಬಹುದಾಗಿದೆ ಎಂದು ಹೇಳಿದರು.
ಅಕ್ರಮ ಲಾಟರಿ ಮತ್ತು ಮಟ್ಕಾ ದಂಧೆಯನ್ನು ನಿಯಂತ್ರಿಸಲು ಸಮಿತಿಯು ಪರಿಶೀಲನೆ ನಡೆಸಬೇಕು. ಲಾಟರಿ ಪ್ಲೈಯಿಂಗ್ ಸ್ಕ್ವಾಡ್ ಸಮಿತಿ ಕಾರ್ಯನಿರ್ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.
ವ್ಯಾಪಾರ ಮಳಿಗೆಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ಅಕ್ರಮ ಲಾಟರಿ ಮಾರಾಟ ನಡೆಯುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗೆ ಸಲಹೆ ಮಾಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಅವರು ಮಾತನಾಡಿ ಜಿಲ್ಲೆಯಲ್ಲಿ 2023 ರ ಜನವರಿಯಿಂದ 2024 ರ ಸೆಪ್ಟೆಂಬರ್ ರವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 49 ಅನಧಿಕೃತ ಲಾಟರಿ ಪ್ರಕರಣಗಳು ವರದಿಯಾಗಿದೆ. ಹಾಗೆಯೇ 6 ಮಟ್ಕಾ ಪ್ರಕರಣಗಳು ವರದಿಯಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಅಂತರ ರಾಜ್ಯ ಗಡಿಭಾಗ ಭಾಗದಲ್ಲಿ ಪೇಪರ್ ಲಾಟರಿ ಮಾರಾಟವಾಗುವ ಸಂಭವವಿದ್ದು, ಈ ಭಾಗದಲ್ಲಿ ಹೆಚ್ಚಿನ ಪೊಲೀಸ್ ನಿಗಾ ವಹಿಸಲಾಗಿದೆ ಎಂದರು.
ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪಿ.ಸಿಂಧು ಅವರು ಹಲವು ಮಾಹಿತಿ ನೀಡಿದರು. ವಾಣಿಜ್ಯ ತೆರಿಗೆ ನಿರೀಕ್ಷಕರು ಆದ ಧನರಾಜ್, ಸಣ್ಣ ಉಳಿತಾಯ ಇಲಾಖೆಯ ಅಭಿವೃದ್ಧಿ ಅಧಿಕಾರಿ ಕುಮಾರ ಇತರರು ಇದ್ದರು.