ಕೊಡಗು/ಸಿದ್ದಾಪುರ: ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ, ಮೀಸಲು ದುಬಾರೆ ಅರಣ್ಯ ಅಂಚಿನಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಎರಡು ಕಾಡುಕೋಣಗಳು ಬಲಿಯಾದ ಘಟನೆ ಕುಶಾಲನಗರ ವಲಯ ಅರಣ್ಯ ಪ್ರದೇಶದ ದುಬಾರೆ ಅವರೆಗುಂದ ಅರಣ್ಯದಂಚಿನಲ್ಲಿ ನಡೆದಿದೆ.
ದುಷ್ಕರ್ಮಿಗಳು ರಾತ್ರಿ ಸುಮಾರು 10 ಗಂಟೆ ವೇಳೆಗೆ ಗುಂಡು ಹಾರಿಸಿದ ಶಬ್ದ ಕೇಳಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳ ಸಿಬ್ಬಂದಿಗಳು ಪರಿಶೀಲನೆ ಸಂದರ್ಭ ಅಂದಾಜು 10 ಹಾಗೂ 6 ವರ್ಷ ಪ್ರಾಯದ ಗಂಡು-ಹೆಣ್ಣು ಕಾಡುಕೋಣಗಳು ಗುಂಡೇಟಿನಿಂದ ಬಲಿಯಾಗಿರುವುದು ಕಂಡು ಬಂದಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅರಣ್ಯದಂಚಿನಲ್ಲಿ ಆರೋಪಿಗಳಿಗಾಗಿ ಪತ್ತೆಗಾಗಿ ರಾತ್ರಿ ಹುಡುಕಾಟ ನಡೆಸಿದ್ದಾರೆ.
ಬೆಳಗ್ಗೆ ಸ್ಥಳಕ್ಕೆ ಡಿಎಫ್‌ಓ ಬಾಸ್ಕರ್, ಎಸಿಎಫ್ ಗೋಪಾಲ್, ಆರ್‌ಎಫ್‌ಓ ರತನ್ ಕುಮಾರ್, ಡಿಆರ್‌ಎಫ್‌ಓ ಹಂಸ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವನ್ಯಜೀವಿ ವೈದ್ಯ ಡಾ. ಚೆಟ್ಟಿಯಪ್ಪ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಸಂಸ್ಕಾರ ಮಾಡಲಾಯಿತು. ಈ ಸಂಬಂಧ ಪ್ರಕರಣ ದಾಖಲಾಗಿದೆ





