Mysore
14
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಕೊಡಗು ವಿವಿ ಉಳಿಸಲು ಕಾನೂನು ಹೋರಾಟಕ್ಕೂ ಸಿದ್ಧ

ಮಡಿಕೇರಿ: ಜನರಿಗೆ ಹತ್ತಿರದ ಶಿಕ್ಷಣ ಸಿಗಬೇಕು ಎಂಬ ಮಹತ್ವದ ಉದ್ದೇಶದಿಂದಲೇ ಕೊಡಗು ವಿವಿ ಆರಂಭಿಸಿರೋದು. ಹಾಗಾಗಿ ಹಣಕಾಸು ಅಥವಾ ಅನುದಾನದ ಕಾರಣದಿಂದ ಕೊಡಗು ವಿವಿ ಮುಚ್ಚಲು ಸರ್ಕಾರ ಮುಂದಾದರೆ ಕಾನೂನು ಹೋರಾಟ ನಡೆಸುವುದಾಗಿ ರಾಜ್ಯ ಉಚ್ಛನ್ಯಾಯಾಲಯದ ವಕೀಲರೂ ಆದ ಕಾಂಗ್ರೆಸ್ ಮುಖಂಡ ಹೆಚ್.ಎಸ್.ಚಂದ್ರಮೌಳಿ ಹೇಳಿದ್ದಾರೆ.

ರಾಜ್ಯದ ಬೇರೆ ವಿವಿಗಳಿಗೆ ಇರುವ ಪರಿಸ್ಥಿತಿ ಕೊಡಗು ವಿವಿಗೆ ಇಲ್ಲ. ಕೊಡಗು ವಿವಿ ಉಳಿಸಲು ರಾಜಕೀಯ ರಹಿತವಾದ ಹೋರಾಟದ ಅನಿವಾರ್ಯತೆ ಇದೆ. ನಮ್ಮ ಜಿಲ್ಲೆಯ ಬಡ ವಿದ್ಯಾರ್ಥಿಗಳು ವಿವಿ ಇಲ್ಲ ಎಂಬ ಕಾರಣಕ್ಕೆ ಹೊರ ಜಿಲ್ಲೆಗಳಿಗೆ ಹೋಗಿ ಉನ್ನತ ಶಿಕ್ಷಣ ಪಡೆಯದಂತಹ ಕೆಟ್ಟ ವಾತಾವರಣ ನಿರ್ಮಾಣ ವಾಗಕೂಡದು. ಲಾಭದಲ್ಲಿಯೇ ನಡೆಸಲು ಇದೇನು ಉದ್ಯಮವಲ್ಲ. ಹಾಗಾಗಿ ಲಾಭ ನಷ್ಟದ ಪ್ರಶ್ನೆ ಅಸಮಂಜಸ ಎಂದು ತಿಳಿಸಿದ್ದಾರೆ.

ಈಗ ಇರುವ ಕೊಡಗು ವಿವಿಗೆ ಸರ್ಕಾರ ಕನಿಷ್ಟ 10 ಕೋಟಿ ರೂ. ಕೊಟ್ಟರೂ ಸಾಕು. ಹೇಗೂ ನಡೆಸಿಕೊಂಡು ಹೋಗಬಹುದು. ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳು ದೂರದೃಷ್ಟಿ ಇಟ್ಟುಕೊಳ್ಳಬೇಕು. ಮಂಗಳೂರು ವಿವಿಗೆ ಕೊಡಗು ವಿವಿ ಸೇರಿಸಿ ಆ ವಿವಿಯ ಭಾರವನ್ನು ಹೆಚ್ಚಿಸೋದಕ್ಕಿಂತ ನಮ್ಮಲ್ಲಿಯೇ ಉಳಿಸಿಕೊಂಡರೆ ಮುಂದಿನ ಹತ್ತು ವರ್ಷಗಳಲ್ಲಿ ಕೊಡಗಿನಲ್ಲಿ ಮಹಾವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತದೆ ಎಂದಿದ್ದಾರೆ.

ವಿವಿ ಕುಲಪತಿಗಳನ್ನು ಜೊತೆಯಲ್ಲಿ ಒಯ್ದು ಸಂಪುಟ ಸಮಿತಿಯ ಸದಸ್ಯರಲ್ಲೊಬ್ಬರಾದ ಸಚಿವ ಹೆಚ್.ಸಿ.ಮಹದೇವಪ್ಪ, ಕೊಡಗು ಉಸ್ತುವಾರಿ ಸಚಿವ ಭೋಸರಾಜು ಅವರನ್ನು ಭೇಟಿಯಾಗಿ ವಾಸ್ತವ ವಿವರಿಸಲಾಗಿದೆ.
ಕೊಡಗಿನ ಮಂದಿ ಒಗ್ಗೂಡಿ ರಾಜಕೀಯ ರಹಿತವಾದ ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕು. ಕೊಡಗಿನ ಜನಪ್ರತಿನಿಧಿಗಳು ಕೂಡ ಜನರ ಪರ ನಿಂತು ಸರ್ಕಾರಕ್ಕೆ ಒತ್ತಾಯ ಮಾಡಬೇಕು.
ನಾವು ರಾಜ್ಯದ ಒಂಭತ್ತು ವಿವಿ ಗಳ ಬಗ್ಗೆ ಮಾತಾಡಲ್ಲ. ಕೊಡಗು ಗುಡ್ಡ ಗಾಡು ಪ್ರದೇಶ. ಇಲ್ಲಿ ಬುಡಕಟ್ಟು, ಪರಿಶಿಷ್ಟ ಜಾತಿ, ವರ್ಗ ಹಾಗೂ ಪಂಗಡಗಳಿಗೆ ಸೇರಿದ ಬಹಳಷ್ಟು ಮಂದಿ ಇದ್ದಾರೆ. ಹಾಗಾಗಿ ಇಲ್ಲಿಯ ಪರಿಸ್ಥಿತಿಯೇ ಬೇರೆ ಇದೆ. ಸಾಕ್ಷರರ ಸಂಖ್ಯೆಯೂ ಕ್ಷೀಣವಾಗಿದೆ. ಹಾಗಾಗಿ ಎಲ್ಲವನ್ನು ಸರ್ಕಾರಕ್ಕೆ ವಿವರಿಸಬೇಕು ಎಂದು ಹೇಳಿದ್ದಾರೆ.

ಕೊಡಗು ವಿವಿಯಲ್ಲಿ ಮತ್ತೆ ಹೊಸದಾಗಿ ಪ್ರವಾಸೋದ್ಯಮ ಹಾಗೂ ಹೋಟೆಲ್ ಮೇನೇಜ್ ಮೆಂಟ್ ಕೋರ್ಸ್ ಅತೀ ಅಗತ್ಯವಿದ್ದು ಬೇಗ ಆರಂಭಿಸುವುದು ಸೂಕ್ತವಾಗಿದ್ದು ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಲಿದೆ.
ವೀರರು, ಯೋಧರು ಹಾಗೂ ಕ್ರೀಡಾಕಲಿಗಳ ಜಿಲ್ಲೆ ಕೊಡಗು ಜಿಲ್ಲೆಯ ವಿವಿ ಕುಲಪತಿಗಳಿಗೆ ಕ್ಯಾಂಪಸ್ ನಲ್ಲಿ ವಸತಿ ನಿಲಯವಿಲ್ಲ. ಓಡಾಡೋಕೆ ಒಂದು ಕಾರು ಕೂಡ ಇಲ್ಲ ಅಂದರೆ ಇದು ನಾಚಿಕೆಗೇಡಿನ ವಿಷಯ.
ಆದ್ದರಿಂದ ಸರ್ಕಾರ ಕೊಡಗು ವಿವಿ ಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ನಾನು ಕೊಡಗು ವಿವಿ ಉಳಿವಿಗೋಸ್ಕರ ನ್ಯಾಯಾಲಯದಲ್ಲಿ ಹೋರಾಟ ನಡೆಸಲೂ ಕೂಡ ಸಿದ್ಧನಿದ್ದೇನೆ ಎಂದು ಚಂದ್ರಮೌಳಿ ಹೇಳಿದ್ದಾರೆ.

Tags:
error: Content is protected !!