Mysore
23
broken clouds
Light
Dark

ವಯನಾಡು ಭೂಕುಸಿತ ದುರಂತ: ಕೊಡಗು ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ

ಕೊಡಗು: ನೆರೆಯ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.

ಕೊಡಗಿನಲ್ಲಿ ಈ ಬಾರಿ ಸುರಿದ ಧಾರಾಕಾರ ಮಳೆಯ ಜೊತೆ ಜೊತೆಗೆ ಪಕ್ಕದಲ್ಲೇ ಇರುವ ಕೇರಳದಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಇದರಿಂದ ಕೊಡಗಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ಬರುತ್ತಿದ್ದು, ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ.

ಕಳೆದ ಬಾರಿ ಕೊಡಗಿಗೆ ಪ್ರವಾಸಿಗರು ಭೇಟಿ ನೀಡಿದ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ಅದರ ಅರ್ಧದಷ್ಟು ಇಲ್ಲ ಎಂದು ಅಂದಾಜಿಸಲಾಗಿದೆ. ಹೀಗಾಗಿ ಕೊಡಗಿನ ವ್ಯಾಪಾರ-ವಹಿವಾಟಿನ ಮೇಲೂ ಹೊಡೆತ ಬಿದ್ದಿದೆ.

ದೇಶದ ವಿವಿಧ ಭಾಗಗಳಿಂದ ಹಿಡಿದು ವಿದೇಶಗಳಿಂದಲೂ ಅಪಾರ ಪ್ರವಾಸಿಗರು ಕೊಡಗಿನ ಸೌಂದರ್ಯ ಸವಿಯಲು ಬರುತ್ತಿದ್ದರು. ಆದರೆ ಈ ಬಾರಿ ಕೊಡಗಿನಲ್ಲಿ ಧಾರಾಕಾರ ಮಳೆಯಾಗಿದ್ದು, ಅಲ್ಲಲ್ಲಿ ಭೂಕುಸಿತ ಉಂಟಾಗಿತ್ತು. ಇದರ ಜೊತೆಗೆ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರವಾಸಿಗರು ಭಯಭೀತರಾಗಿದ್ದಾರೆ.

ಕೊಡಗಿನಲ್ಲಿರುವ ಪ್ರವಾಸಿ ತಾಣಗಳು ಬಹುತೇಕ ಬೆಟ್ಟಗುಡ್ಡಗಳಲ್ಲೇ ಇವೆ. ಹಾಗಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಈ ಬಾರಿ ಇಳಿಮುಖವಾಗಿದ್ದು, ವ್ಯಾಪಾರ-ವಹಿವಾಟು ಕೂಡ ಹೆಚ್ಚಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯರೇ ಮಾಹಿತಿ ನೀಡಿದ್ದಾರೆ.