ಕೊಡಗು: ವೀರ ಸೇನಾನಿಗಳನ್ನು ಅವಮಾನಿಸಿದ ವಿದ್ಯಾದರ್ ಗಡಿ ಪಾರಿಗೆ ಒತ್ತಾಯಿಸಿ ನಾಳೆ ಕೊಡಗು ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ.
ವೀರ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಗೌರವ ತೋರಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ನಾಳೆ ಬಂದ್‌ಗೆ ಕರೆ ನೀಡಲಾಗಿದೆ.
ಕೊಡಗು ಸರ್ವ ಜನಾಂಗಗಳ ಒಕ್ಕೂಟದ ವತಿಯಿಂದ ನಾಳೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೊಡಗು ಬಂದ್‌ಗೆ ಕರೆ ನೀಡಲಾಗಿದೆ.
ಈ ಮೂಲಕ ನಾಳೆ ಮಧ್ಯಾಹ್ನ 12ರವರೆಗೆ ಕೊಡಗು ಜಿಲ್ಲೆ ಸಂಪೂರ್ಣ ಸ್ತಬ್ಧವಾಗಲಿದ್ದು, ಎಲ್ಲರೂ ಬಂದ್‌ಗೆ ಸಹಕಾರ ನೀಡಬೇಕೆಂದು ಮನವಿ ಮಾಡಲಾಗಿದೆ.
ಇನ್ನು ನಾಳಿನ ಬಂದ್‌ಗೆ ಕೊಡಗು ಜಿಲ್ಲಾ ಬಿಜೆಪಿ ಬೆಂಬಲ ನೀಡಿದ್ದು, ಬಂದ್ ಯಶಸ್ವಿಯಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೊಡಗು ಜಿಲ್ಲಾ ಬಿಜೆಪಿ, ಈ ಪ್ರಕರಣ ನಡೆದ ಕೂಡಲೇ ಮೊಕದ್ದಮೆ ದಾಖಲಿಸಿದ್ದೇವೆ. ಜಿಲ್ಲೆಯಲ್ಲಿ ಶಾಂತಿಯನ್ನು ಕದಡಲು ಇಂತಹ ಶಕ್ತಿಗಳಿಗೆ ಪೊಲೀಸ್ ಇಲಾಖೆ ಅವಕಾಶ ಕೊಡಬಾರದು. ಇದರ ಹಿಂದೆ ಯಾವ ಕಾಣದ ಕೈ ಕೆಲಸ ಮಾಡಿದೆ ಎಂಬುದನ್ನು ಯಾರ ಮುಲಾಜಿಗೂ ಒಳಗಾಗದೇ ತನಿಖೆ ನಡೆಸಿ ಸಮಾಜಕ್ಕೆ ನ್ಯಾಯವನ್ನು ಒದಗಿಸಬೇಕಾಗಿ ನಾವು ಒತ್ತಾಯಿಸುತ್ತಾ, ಈ ದೃಷ್ಟಿಯಿಂದ ನಾಳಿನ ಶಾಂತಿಯುವ ಬಂದ್‌ಗೆ ಬೆಂಬಲ ಸೂಚಿಸಿದ್ದೇವೆ ಎಂದು ಮಾಹಿತಿ ನೀಡಿದೆ.





