ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜೀವನದಿ ಕಾವೇರಿ ಭೋರ್ಗರದು ಹರಿಯುತ್ತಿದ್ದಾಳೆ. ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ ಜಿಲ್ಲೆಯ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಲಕಾವೇರಿ ಸೇರಿದಂತೆ ಬ್ರಹ್ಮಗಿರಿ ಬೆಟ್ಟ ಶ್ರೇಣಿಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ ನದಿಯ ಉಪನದಿಗಳಾದ ಕನ್ನಿಕೆ, ಸುಜ್ಯೋತಿ ನದಿ ಸಂಗಮ ಕ್ಷೇತ್ರವಾದ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದ್ದು, ನೀರಿನ ಮಟ್ಟ ಇನ್ನಷ್ಟು ಹೆಚ್ಚುತ್ತಿದೆ.
ಭಾಗಮಂಡಲ ನಾಪೋಕ್ಲು ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ಸಂಚಾರಕ್ಕೆ ಅಸ್ತವ್ಯಸ್ತವಾಗಿದೆ.
ಇನ್ನೂ ಮೂರ್ನಾಡು ಹೊದ್ದೂರು ಬಳಿಯ ಬಲಮುರಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಾವೇರಿ ನದಿಯ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದ್ದು, ಕೆಲವು ಕುಟುಂಬಗಳನ್ನು ತೆರವುಗೊಳಿಸಲಾಗಿದೆ.