Mysore
23
scattered clouds
Light
Dark

ಗುಡ್ಡ ಕುಸಿಯುವ ಭೀತಿ: ಮಡಿಕೇರಿ-ಮಂಗಳೂರು ರಸ್ತೆ ಸಂಚಾರ ರಾತ್ರಿ ವೇಳೆ ಬಂದ್…

ಮಡಿಕೇರಿ: ಮಡಿಕೇರಿ-ಮಂಗಳೂರು ರಸ್ತೆಯ ಮದೆನಾಡು ಬಳಿಯ ಕರ್ತೋಜಿ ಬಳಿ ತೀವ್ರ ಮಳೆಯಿಂದಾಗಿ ರಸ್ತೆಯ ಬಲಬದಿಯ ಗುಡ್ಡ ಕುಸಿಯುವ ಸಾಧ್ಯತೆ ಇದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಜುಲೈ 22 ರವರೆಗೆ ರಾತ್ರಿ ವೇಳೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರಕ್ಕೆ ನಿಷೇಧ ಹೇರಿ ಕೊಡಗು ಜಿಲ್ಲಾಧಿಕಾರಿ ವೆಂಕಟ ರಾಜಾ ಆದೇಶ ಹೊರಡಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ಹೆಚ್ಚಿನ ಅವಘಡ ಸಂಭವಿಸುಬಹುದಾದ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜುಲೈ 18 ರ ರಾತ್ರಿ 8 ಗಂಟೆಯಿಂದ ಜುಲೈ 22ರ ಬೆಳಿಗ್ಗೆ 6 ಗಂಟೆ ವರೆಗೆ ಹೆದ್ದಾರಿಯಲ್ಲಿ ಮಡಿಕೇರಿಯಿಂದ ಸಂಪಾಜೆವರೆಗೆ ರಾತ್ರಿ ವೇಳೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ  ತಿಳಿಸಿದ್ದಾರೆ.

ರಸ್ತೆ ಸಂಚಾರ ನಿಷೇಧಕ್ಕೆ ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಅಧಿಕಾರಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಹವಾಮಾನ ಇಲಾಖೆ ವರದಿಯಂತೆ ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿನ ತೀವ್ರ ಮಳೆಯಾಗಲಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವಿವ ಕರ್ತೋಜಿ ಪ್ರದೇಶದಲ್ಲಿ ತುರ್ತು ಸೇವೆ ಹಾಗೂ ಪ್ರಕೃತಿ ವಿಕೋಪ ಸಂಬಂಧಿತ ಕಾರ್ಯದ ಅಧಿಕಾರಿ ಸಂಚರಿಸುವ ವಾಹನ ಹೊರತುಪಡಿಸಿ, ಇನ್ನುಳಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.