ಕೊಡಗು: ಬೇಸಿಗೆಯ ತಾಪಮಾನ ಅಧಿಕವಾಗುತ್ತಿರುವಾಗಲೇ ನಾಪೋಕ್ಲುಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಇಂದು ಸಹ ಗುಡುಗು ಸಹಿತ ಒಂದು ಇಂಚಿಗೂ ಅಧಿಕ ಮಳೆ ಸುರಿದು ಕಾದ ಭುವಿಗೆ ತಂಪೆರೆದಿದೆ.
ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ನಾಪೋಕ್ಲು ಜನತೆಗೆ ಇಂದು ಸುರಿದ ಮಳೆ ತಂಪೆರೆದಿದ್ದು, ಜನರಲ್ಲಿ ಹರ್ಷ ಮೂಡಿಸಿದೆ.
ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಬೇತು, ಹಳೇ ತಾಲೂಕು, ಚೆರಿಯಪರಂಬು, ಚೋನಾಕೆರೆ ಕೊಟ್ಟಮುಡಿ, ಕೊಳಕೇರಿ ಗ್ರಾಮ ವ್ಯಾಪ್ತಿಯಲ್ಲಿ ಇಂದು ಸಂಜೆ ವೇಳೆಗೆ ಒಂದು ಇಂಚಿಗೂ ಅಧಿಕ ಮಳೆ ಸುರಿದು ಕಾದ ಭುವಿಗೆ ತಂಪೆರಿದಿದೆ.
ನಾಪೋಕ್ಲು ವಿಭಾಗದ ವಿವಿಧ ಗ್ರಾಮಗಳಿಗೆ ಕಳೆದ ಕೆಲವು ದಿನಗಳಿಂದ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ನಾಪೋಕ್ಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಮಳೆ ಕಣ್ಮರೆಯಾಗಿ ಜನರಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಇಂದು ಸುರಿದ ಮಳೆ ಜನರಲ್ಲಿ ಸಂತಸ ಮೂಡಿಸಿದೆ. ನಾಪೋಕ್ಲು ವ್ಯಾಪ್ತಿಯ ಹಲವು ಕಡೆ ಕಾಫಿ ಕೊಯ್ಲು ಕಾರ್ಯ ಪೂರ್ಣ ಗೊಂಡು ಬೆಳೆಗಾರರು ಹೂ ಮಳೆಗಾಗಿ ಕಾಯುತ್ತಿರುವಾಗಲೇ ಇಂದು ಉತ್ತಮ ಮಳೆಯ ಆಗಮನದಿಂದ ಬೆಳೆಗಾರ ಹರ್ಷಗೊಂಡಿದ್ದಾನೆ.
ಎಮ್ಮೆಮಾಡು, ನೆಲಜಿ, ಬಲ್ಲಮಾವಟಿ, ಕಕ್ಕಬ್ಬೆ ಕುಂಜಿಲ ಸೇರಿದಂತೆ ನಾಪೋಕ್ಲು ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕಳೆದ ಕೆಲವು ದಿನಗಳ ಹಿಂದೆ ಉತ್ತಮ ಮಳೆಯಾಗಿತ್ತು. ಅದರಂತೆ ಎಮ್ಮೆಮಾಡು ವ್ಯಾಪ್ತಿಯಲ್ಲೂ ಕಳೆದ ಎರಡು ದಿನಗಳ ಹಿಂದೆ ಒಂದು ಇಂಚಿಗೂ ಅಧಿಕ ಮಳೆ ಸುರಿದಿದೆ.




