ಕೊಡಗು: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಜಿಲ್ಲೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬಂದಿಳಿದಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನರ ಜೊತೆ ಜಿಲ್ಲಾಡಳಿತ ಮಳೆಗಾಲದ ಸವಾಲುಗಳನ್ನು ಎದುರಿಸಲು ಸಿದ್ಧತೆ ನಡೆಸಿದ್ದು, ಇದರ ಭಾಗವಾಗಿ ಜಿಲ್ಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಬಂದಿಳಿದಿದೆ. ತಂಡವು ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದೆ.
ಕಳೆದ ಮೂರು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದು, ಗುಡ್ಡದ ಮೇಲೆ ವಾಸಿಸುತ್ತಿರುವ ಜನರನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.
ಮಳೆ ಮುಂದುವರಿದಿರುವ ಪರಿಣಾಮ ಕೊಡಗು ಜಿಲ್ಲಾಡಳಿತ ಮಳೆ ಸವಾಲು ಎದುರಿಸಲು ಸಜ್ಜಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ಮುಂದಿನ ಮೂರು ತಿಂಗಳು ಇಲ್ಲಿಯೇ ಇದ್ದು ಮಳೆಗಾಲ ಎದುರಿಸಲು ಜಿಲ್ಲಾಡಳಿತಕ್ಕೆ ಸಹಕರಿಸಲಿದೆ.
ಕೊಡಗು ಜಿಲ್ಲೆಗೆ ಆಗಮಿಸಿದ ಎನ್‌ಡಿಆರ್‌ಎಫ್ ಯೋಧರು ಗುಡ್ಡ ಕುಸಿತ, ಪ್ರವಾಹದಂತಹ ಸಂದರ್ಭದಲ್ಲಿ ಜಿಲ್ಲೆಯ ಜನರ ಹಾಗೂ ಜಾನುವಾರುಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಬೆಂಗಳೂರಿನಲ್ಲಿರುವ ಎನ್‌ಡಿಆರ್‌ಎಫ್‌ನ ರೀಜಿನಲ್ ರೆಸ್ಪಾನ್ಸ್ ಸೆಂಟರ್‌ನ 10ನೇ ಬೆಟಾಲಿಯನ್‌ನಲ್ಲಿರುವ 25 ಯೋಧರು ಇನ್ಸ್‌ಪೆಕ್ಟರ್ ಅಜಯ್ ಅವರ ನೇತೃತ್ವದಲ್ಲಿ ಬಂದಿಳಿದಿದ್ದಾರೆ. ಅಗತ್ಯ ಬಿದ್ದರೆ ಮತ್ತಷ್ಟು ಸಿಬ್ಬಂದಿ ಮತ್ತು ಸಲಕರಣೆಗಳನ್ನು ತರಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಒಂದು ವೇಳೆ ಮಳೆ ಪ್ರಮಾಣ ಜಾಸ್ತಿಯಾದರೆ ಐದು ತಾಲ್ಲೂಕುಗಳಲ್ಲಿಯೂ ಭೂಕುಸಿತವಾಗುವ ಸಾಧ್ಯತೆಯಿದೆ. 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಕಾಣಿಸಿಕೊಳ್ಳಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಅಂದಾಜು ಮಾಡಿದ್ದು, ಇಂತಹ ಜಾಗಗಳ ಪೈಕಿ ಹೆಚ್ಚು ಅಪಾಯಕಾರಿ ಪ್ರದೇಶಗಳಿಗೆ ತಂಡ ಭೇಟಿ ನೀಡಿ, ಜನತೆಗೆ ಧೈರ್ಯ ಹೇಳಲಿದೆ.