Mysore
28
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕೊಡಗು ಜಿಲ್ಲೆಯಾದ್ಯಂತ ಉತ್ತಮ ಮಳೆ: ಹಾರಂಗಿ ಜಲಾಶಯ ಬಹುತೇಕ ಭರ್ತಿ

ಕೊಡಗು: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದೆ.

2859 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಈಗಾಗಲೇ 2849 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯದ ಭದ್ರತೆಯ ದೃಷ್ಟಿಯಿಂದ ಜಲಾಶಯ ಭರ್ತಿಯಾಗಲು 10 ಅಡಿ ಬಾಕಿಯಿರುವಾಗಲೇ ನದಿಗೆ ನೀರನ್ನು ಹರಿಸಲಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ನದಿ-ತೊರೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಸದ್ಯ 2394 ಕ್ಯೂಸೆಕ್ಸ್‌ ಒಳಹರಿವಿದೆ. 8 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗಾಗಲೇ 6 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಮಳೆ ಉತ್ತಮವಾಗಿರುವ ಮುನ್ಸೂಚನೆ ಇರುವುದರಿಂದ ನದಿಗೆ ಹರಿಸುತ್ತಿದ್ದ 200 ಕ್ಯೂಸೆಕ್ಸ್‌ ನೀರಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ.

ಹಾರಂಗಿ ಜಲಾಶಯದ ಸಂಗ್ರಹ ಸಾಮರ್ಥ್ಯ 8 ಟಿಎಂಸಿ ಆಗಿದ್ದು, ಪ್ರತಿ ಸಲ 7 ಟಿಎಂಸಿ ನೀರನ್ನು ಮಾತ್ರ ಇರಿಸಿಕೊಂಡು ಉಳಿದ ನೀರನ್ನು ಹೊರಬಿಡಲಾಗುತ್ತದೆ. ಈ ಬಾರಿ ಜಿಲ್ಲೆಯಲ್ಲಿ ಮೇ ತಿಂಗಳಿನಿಂದಲೂ ಉತ್ತಮ ಮಳೆಯಾಗುತ್ತಿದೆ. ಜೂನ್‌ ಅಂತ್ಯದಲ್ಲಿ ಇರಂತರ ಮಳೆಯಾಗುತ್ತಿದ್ದು, ಈ ತಿಂಗಳಿಡೀ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈಗಾಗಲೇ ಜಲಾಶಯಕ್ಕೆ 2400 ಕ್ಯೂಸೆಕ್ಸ್‌ ಒಳಹರಿವಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನು ಹೆಚ್ಚಾಗುತ್ತಾ ಹೊಗುವ ನಿರೀಕ್ಷೆಯಿದೆ. ಹೀಗಾದರೇ ಸದ್ಯ 6 ಟಿಎಂಸಿಯಷ್ಟಿರುವ ನೀರು ಇನ್ನೆರಡು ಅಥವಾ ಮೂರು ದಿನಗಳಲ್ಲಿ 7 ಟಿಎಂಸಿ ದಾಟಲಿದೆ. ಜಲಾಶಯದಿಂದ ಒಮ್ಮೆಲೆ ಹೆಚ್ಚಿನ ಪ್ರಮಾಣದ ನೀರು ಹೊರಬಿಡುವುದನ್ನು ತಪ್ಪಿಸುವ ಸಲುವಾಗಿ ಜಲಾಶಯ ಭರ್ತಿಗೆ ಇನ್ನೂ 10 ಅಡಿಗಳು ಬಾಕಿಯಿರುವಾಗಲೇ ನದಿಗೆ ನೀರು ಹರಿಸಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಾರಂಗಿ ಜಲಾಶಯದಿಂದ ಒಮ್ಮೆಲೇ ಹೆಚ್ಚಿನ ಪ್ರಮಾಣದ ನೀರು ಹರಿಸಿದರೆ ಈ ನೀರು ಕಾವೇರಿಗೆ ಸೇರುವಲ್ಲಿ ಒತ್ತಡ ಉಂಟಾಗಿ ಕುಶಾಲನಗರದ ಹಲವು ಬಡಾವಣೆಗಳು ಮುಳುಗಡೆಯಾಗುತ್ತವೆ. ಪ್ರವಾಹದಿಂದ ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ಕಳೆದೆರಡು ವರ್ಷಗಳಿಂದ ಹಾರಂಗಿ ಜಲಾಶಯ ತುಂಬಲು ಇನ್ನೂ ಕೆಲ ಅಡಿಗಳು ಬಾಕಿ ಇರುವಾಗಲೇ ಒಳಹರಿವಿನ ಆಧಾರದಲ್ಲಿ ನೀರನ್ನು ನದಿಗೆ ಹರಿಸಲಾಗುತ್ತದೆ.

Tags: