ಕೊಡಗು: ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಕೊಡಗಿನಲ್ಲಿ ಕಳೆದ ಐದು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರೀ ಮಳೆಗೆ ಹಳ್ಳ-ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿದ್ದು, ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆಯಿಂದ ಹಲವಡೆ ಗುಡ್ಡ ಕುಸಿತವಾಗಿದ್ದು, ಮನೆಗಳು ಕೂಡ ಜಖಂಗೊಂಡಿವೆ. ಮನೆಯಲ್ಲಿದ್ದ ಜನರನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಭಾರೀ ಮಳೆಗೆ ಬೃಹತ್ ಗಾತ್ರದ ಮರಗಳು ಧರೆಗುರುಳಿದ್ದು, ವಾಹನ ಸಂಚಾರಕ್ಕೆ ಭಾರೀ ತೊಂದರೆ ಉಂಟಾಗಿದೆ.
ಮಳೆಯ ಆರ್ಭಟಕ್ಕೆ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಕಾವೇರಿ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಪ್ರವಾಹ ಉಂಟಾಗಿದ್ದು, ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಬಳಿಯಿರುವ ದುಬಾರೆ ಆನೆ ಶಿಬಿರಕ್ಕೆ ಅರಣ್ಯ ಇಲಾಖೆ ನಿಷೇಧ ಹೇರಿದೆ. ಸುರಕ್ಷತೆ ದೃಷ್ಟಿಯಿಂದ ದುಬಾರೆ ಪ್ರವಾಸಿ ತಾಣಕ್ಕೆ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದ್ದು, ವೀಕೆಂಡ್‌ನಲ್ಲಿ ಪ್ರವಾಸದ ಪ್ಲಾನ್‌ನಲ್ಲಿದ್ದ ಪ್ರವಾಸಿಗರಿಗೆ ಭಾರೀ ಬೇಸರವಾಗಿದೆ.
ಮಳೆ ಅವಾಂತರಕ್ಕೆ ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತವಾಗಿದ್ದು, ಪವಿತ್ರ ಸ್ನಾನಘಟ್ಟ ಜಲಾವೃತವಾಗಿ ಭಕ್ತರು ಪರದಾಡುವಂತಾಗಿದೆ. ಸ್ನಾನಘಟ್ಟದ ಮುಖ್ಯ ದ್ವಾರದವರೆಗೂ ನೀರಿನ ಮಟ್ಟ ಏರಿಕೆಯಾಗಿದ್ದು, ದ್ವಾರದಲ್ಲೇ ಪಿಂಡ ಪ್ರಧಾನ ಮಾಡುವ ಸಂಧರ್ಭ ಒದಗಿ ಬಂದಿದೆ.
ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರಿಗೆ ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಯಾರೂ ನದಿ ಬಳಿ ಹೋಗಬಾರದು ಎಂದು ಮನವಿ ಮಾಡಿದ್ದಾರೆ. ಇದರ ಜೊತೆಗೆ ಕಾವೇರಿ ನದಿ ವೀಕ್ಷಣೆಗೂ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.