ಕೊಡಗು: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ 24 ಗಂಟೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 92.22 ಮಿ.ಮೀ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಜಿಲ್ಲೆಯಲ್ಲಿ ಕಳೆದ ವರ್ಷ ಇದೇ ದಿನ 3.91ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಮಳೆ 736.67 ಮಿ.ಮೀ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 238.53 ಮಿ.ಮೀ ಮಳೆಯಾಗಿತ್ತು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇನ್ನೂ ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ ಮಳೆ 160.07 ಮಿ.ಮೀ ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗಿನ ಮಳೆ 1083.85 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 417.25 ಮಿ.ಮೀ ಮಳೆಯಾಗಿತ್ತು. ಕೊಡಗಿನಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಕಾವೇರಿ ನದಿ ತುಂಬಿ ಹರಿಯುತ್ತಿದೆ.
ವಿರಾಜಪೇಟೆ ತಾಲ್ಲೂಕಿನಲ್ಲಿ ಸರಾಸರಿ ಮಳೆ 103.50 ಮಿ.ಮೀ ಮಳೆ ಆಗಿದೆ. ಜನವರಿಯಿಂದ ಇಲ್ಲಿಯವರೆಗಿನ ಮಳೆ 726.45 ಮಿ.ಮೀ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 169.41 ಮಿ.ಮೀ ಮಳೆಯಾಗಿತ್ತು. ಭಾರೀ ಮಳೆಯ ಪರಿಣಾಮ ಭಾಗಮಂಡಲ ಜಲಾವೃತವಾಗಿದೆ.
ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ರಸ್ತೆಗಳೆಲ್ಲಾ ಸಂಪೂರ್ಣ ಜಲಾವೃತವಾಗಿದ್ದು, ಚಿಕ್ಕ ಚಿಕ್ಕ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಮಳೆ ಹೀಗೇಯೇ ಮುಂದುವರಿದರೆ ನಾಳೆಯೂ ಕೂಡ ಶಾಲಾ-ಕಾಲೇಜುಗಳಿಗೆ ರಜೆ ನೀಡೋದು ಪಕ್ಕಾ ಆಗಿದೆ. ಮಳೆಯ ಪ್ರಮಾಣ ನೋಡಿಕೊಂಡು ನಾಳೆ ಬೆಳಿಗ್ಗೆ ಕೊಡಗು ಜಿಲ್ಲಾಧಿಕಾರಿ ರಜೆಯ ಬಗ್ಗೆ ನಿರ್ಧರಿಸಲಿದ್ದಾರೆ.