ಕೊಡಗು: ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಯಿಂದ ಹಲವೆಡೆ ಬೃಹದಾಕಾರದ ಮರಗಳು ಧರೆಗುರುಳಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮಾದಾಪುರ ಸಮೀಪದಲ್ಲಿ ಮರ, ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.
ಇನ್ನು ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಜೀವನದಿ ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಇನ್ನು ಅಮ್ಮತ್ತಿ ಹೋಬಳಿ ಪುಲಿಗೇರಿ ಗ್ರಾಮದ ಶೀಜಾ ರಜೀಶ್ ಎಂಬುವವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, ಮನೆ ಭಾಗಶಃ ಹಾನಿಯಾಗಿದೆ. ಜೊತೆಗೆ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೂ ವಿದ್ಯುತ್ ಕಂಬ ಬಿದ್ದಿದ್ದು, ಕಾರು ಜಖಂಗೊಂಡಿದೆ.
ಇನ್ನು ಭಾರೀ ಮಳೆಯಿಂದ ಸೋಮವಾರಪೇಟೆ ಯಡೂರು ಗ್ರಾಮದ ಹೊನ್ನಪ್ಪ ಎಂಬುವವರ ಮನೆ ಮುಂಭಾಗದಲ್ಲಿ ಬರೆ ಕುಸಿದಿದ್ದು, ಆತಂಕ ಸೃಷ್ಟಿಯಾಗಿದೆ.




