ಮಡಿಕೇರಿ : ರಾಜ್ಯದಲ್ಲಿ ಕಳೆದ ೨ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಎಲ್ಲೆಡೆ ಕೆರೆ-ಕಟ್ಟೆಗಳು, ನದಿಗಳು, ಜಲಪಾತಗಳು ತುಂಬಿ ತುಳುತ್ತಿವೆ. ಇನ್ನು ಕೊಡಗು ಭಾಗದಲ್ಲೂ ಭಾರೀ ಮಳೆಯಾಗಿದ್ದು, ಒಂದೆಡೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಅಲ್ಲದೆ ಮಡಿಕೇರಿಯಲ್ಲೂ ಸುರಿಯುತ್ತಿರುವ ವರ್ಷದ ಮೊದಲ ಮಳೆಗೆ ಕಾಲುವೆಗಳು ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.
ಮಡಿಕೇರಿಯ ಕಾಲುವೆಯೊಂದರಲ್ಲಿ ಮಳೆಯ ನೀರಿನ ಜೊತೆಗೆ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲ್ ಗಳು, ಕವರ್ ಗಳು ತೇಲಿ ಬರುತ್ತಿದ್ದು, ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಇದು ಪ್ರಕೃತಿಗೆ ಜನರು ಕೊಟ್ಟ ಕೊಡುಗೆ ಎಂದು ಟೀಕಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದು, ಪ್ಲಾಸ್ಟಿಕ್ ಬಾಟಲ್ ಕಡಿಮೆ ಬಳಸಿ ಎಂದು ನೆಟ್ಟಿಗರು ಸಹ ಕಮೆಂಟ್ ಮಾಡಿದ್ದಾರೆ.