ಮಡಿಕೇರಿ: ಭಾರೀ ಮಳೆಯಿಂದ ಪ್ರವಾಹಕ್ಕೆ ಒಳಗಾಗಿರುವ ಕಾವೇರಿ ನದಿ ತೀರದ ಪ್ರದೇಶಗಳಿಗೆ ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ಸಿದ್ದಾಪುರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದ್ದರು. ಈ ವೇಳೆ ಸಂತ್ರಸ್ತರು ಶಾಶ್ವತ ಪುನರ್ವಸತಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ್, ಕಾಂಗ್ರೆಸ್ ಸರ್ಕಾರ ಪರಿಹಾರ ವಿತರಣೆಗೆ ವಿಳಂಬ ಮಾಡುವುದು ಸರಿಯಲ್ಲ. ಕೂಡಲೇ ಸಂತ್ರಸ್ತರ ಬೇಡಿಕೆಯನ್ನು ಈಡೇರಿಸಿ ಶಾಶ್ವತ ಪುನರ್ ವಸತಿ ಕಲ್ಪಿಸಲಿ ಎಂದು ಒತ್ತಾಯಿಸಿದರು.
ಈ ಹಿಂದೆ ಶಾಶ್ವತ ಪರಿಹಾರದ ಚಿಂತನೆ ಮಾಡಿ ಜಾಗ ಗುರುತಿಸಲಾಗಿತ್ತು. ಸಂತ್ರಸ್ತರು ಸ್ಥಳದಿಂದ ತೆರಳಲು ಮುಂದಾಗಿರಲಿಲ್ಲ. ಆದರೆ, ಈಗ ಸಂತ್ರಸ್ತರು ಪುನರ್ ವಸತಿ ಸ್ಥಳಗಳಿಗೆ ತೆರಳಲು ಒಪ್ಪಿದ್ದಾರೆ. ಸರ್ಕಾರ ಆದಷ್ಟು ಬೇಗ ಶಾಶ್ವತ ವ್ಯವಸ್ಥೆಯನ್ನು ಮಾಡಬೇಕು ಎಂದರು.
ಎಂ.ಎಲ್.ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕ ಕೆ ಜಿ ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಿ.ಕೆ ಲೋಕೇಶ್ ಸೇರಿದಂತೆ ಮುಖಂಡರು ಹಾಜರಿದ್ದರು.