ಮಡಿಕೇರಿ: ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟ್ಟಂಗಾಲ ಗ್ರಾಮದ ಅಂಚೆ ಕಚೇರಿ ಸೇರಿದಂತೆ ವಿವಿಧೆಡೆ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕಕ್ಕಬ್ಬೆ ಗ್ರಾಮದ ನಾಲಡಿ ಕೆ.ಸಿ. ಅಶೋಕ(35), ಸೋಮವಾರಪೇಟೆ ಕಿಬ್ಬೆಟ್ಟ ಗ್ರಾಮದ ಕೆ.ಪಿ. ಕೀರ್ತಿ(25), ಸೋಮವಾರಪೇಟೆ ರೇಂಜರ್ ಬ್ಲಾಕ್‌ನ ರಿಯಾಜ್(26) ಬಂಧಿತ ಆರೋಪಿಗಳು.
2024ರ ನ.30ರಂದು ಬಿಟ್ಟಂಗಾಲ ಗ್ರಾಮದ ಅಂಚೆ ಕಚೇರಿಯ ಬಾಗಿಲು ಮುರಿದು ಖಜಾನೆ ಬಾಕ್ಸ್, ಸ್ಟಾಂಪ್‌ಗಳು, ಅಂಚೆ ಪಾಸ್ ಪುಸ್ತಕಗಳು ಮತ್ತು ಸಿಸಿಟಿವಿಯ ಡಿವಿಆರ್ ಅನ್ನು ಕಳವು ಮಾಡಿರುವ ಕುರಿತು ಪ್ರಕರಣ ದಾಖಲಾಗಿತ್ತು. ಜೊತೆಗೆ ಬಿಟ್ಟಂಗಾಲ ಗ್ರಾಮದ ನಿವಾಸಿ ಮಾಚಯ್ಯ ಎಂಬುವವರ ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಕೆಎ-04-ಎನ್-5010 ಸಂಖ್ಯೆಯ ಮಾರುತಿ ಓಮಿನಿ ವಾಹನ ಕಳ್ಳತನವಾಗಿರುವ ಬಗ್ಗೆಯೂ ದೂರು ಸ್ವೀಕರಿಸಲಾಗಿತ್ತು. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಅಧಿಕಾರಿ, ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು.
ಪ್ರಕರಣಗಳ ಆರೋಪಿಗಳ ಪತ್ತೆಯ ಸಲುವಾಗಿ ವಿರಾಜಪೇಟೆ ಡಿಎಸ್‌ಪಿ ಮಹೇಶ್ ಕುಮಾರ್, ಸಿಪಿಐ ಅನೂಪ್ ಮಾದಪ್ಪ, ಪಿಎಸ್‌ಐಗಳಾದ ಲತಾ, ವಾಣಿಶ್ರೀ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು & ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ಸಂಬಂಧ ಮಾಹಿತಿ ಸಂಗ್ರಹಿಸಿ ಫೆ.10ರಂದು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸದರಿ ಆರೋಪಿಗಳು ಗೋಣಿಕೊಪ್ಪ, ಭಾಗಮಂಡಲ, ಮಡಿಕೇರಿ ಗ್ರಾಮಾಂತರ ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಚಿನ್ನ-ಬೆಳ್ಳಿ ಆಭರಣಗಳು, ದ್ವಿಚಕ್ರ ವಾಹನ ಹಾಗೂ ಮರ ಕುಯ್ಯುವ ಯಂತ್ರವನ್ನು ಕಳ್ಳತನ ನಡೆಸಿರುವುದು ಕೂಡ ತನಿಖೆಯಲ್ಲಿ ಕಂಡುಬಂದಿದೆ.
ಬಂಧಿತರಿಂದ ಸಿಸಿಟಿವಿ ಡಿವಿಆರ್ & ಖಜಾನೆ ಬಾಕ್ಸ್ ಮತ್ತು ರೂ.930 ಮೌಲ್ಯದ ಸ್ಟಾಂಪ್‌ಗಳು, ಮಾರುತಿ ಕಾರು, ಎರಡು ದ್ವಿಚಕ್ರ ವಾಹನಗಳು, ಮರ ಕುಯ್ಯುವ ಯಂತ್ರ, 1 ಏರ್ ಗನ್, 200 ಕೆ.ಜಿ. ಕಾಫಿ, ಕಾಳುಮೆಣಸು 250 ಕೆ.ಜಿ., 30 ಗ್ರಾಂ ಚಿನ್ನ, 229 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್‌ಪಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.





