ಕೊಡಗು: ರಸ್ತೆಯಲ್ಲಿ ಸಾಗುತ್ತಿದ್ದ ಮಾರುತಿ ವ್ಯಾನ್ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಪೊನ್ನಂಪೇಟೆ ಬಳಿಯ ಕಾನೂನು ಕುಟ್ಟ ರಸ್ತೆಯ ಕೇಂಬುಕೊಲ್ಲಿಯ ಬಿ.ಸಿ.ಕುಟ್ಟಪ್ಪನವರ ಮನೆಯ ಮುಂಭಾಗ ಈ ಘಟನೆ ನಡೆದಿದ್ದು, ಆನೆ ದಾಳಿಗೆ ಓಮ್ನಿ ಮುಂಭಾಗ ನಜ್ಜು ಗುಜ್ಜಾಗಿದೆ.
ರಸ್ತೆಯಲ್ಲಿ ಸಾಗುತ್ತಿದ್ದ ಮುಕ್ಕಾಟೀರ ಮಧು ಎಂಬುವವರ ಮಾರುತಿ ವ್ಯಾನ್ ಅಡ್ಡಲಾಗಿ ಬಂದ ಕಾಡಾನೆ, ಮುಂಭಾಗವನ್ನು ಗುದ್ದಿ ಜಖಂಗೊಳಿಸಿದೆ.
ಹಿಂಬದಿಯಲ್ಲಿ ವಾಹನಗಳ ಸಾಲು ಇದ್ದುದರಿಂದ ಬೆದರಿದ ಆನೆ ವ್ಯಾನನ್ನು ಬಿಟ್ಟು ತೋಟದೊಳಗೆ ನುಸುಳಿತು. ಸದ್ಯ ವ್ಯಾನಿನೊಳಗಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗಿದ್ದು, ಇದನ್ನು ತಡೆಯಲು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಎಚ್ಚೆತ್ತುಕೊಂಡು ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.





