Mysore
21
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಆದಿವಾಸಿ ಕುಟುಂಬಗಳಿಗೆ ನಿವೇಶನ ಒದಗಿಸಲು ಒತ್ತಾಯ

madikeri trible

ಮಡಿಕೇರಿ : ಜಿಲ್ಲೆಯ ನಿವೇಶನ ರಹಿತ ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಿ ಮನೆ ನಿರ್ಮಾಣ ಮತ್ತು ಮೂಲಸೌಲಭ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು(ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್) ಅಧ್ಯಕ್ಷ ಪಿ.ಆರ್.ಭರತ್, ಜಿಲ್ಲೆಯಲ್ಲಿ ಸಾವಿರಾರು ಆದಿವಾಸಿ ಕುಟುಂಬಗಳಿವೆ. ಇವರು ಜಿಲ್ಲೆಯಲ್ಲಿ ಮೂಲ ನಿವಾಸಿಗಳಾಗಿದ್ದು, ಸ್ವಂತ ವಾಸಕ್ಕೆ ಮನೆಯಿಲ್ಲದ ಕಾರಣಕ್ಕಾಗಿ ಜೀವನ ಪರ್ಯಂತ ಬಾಡಿಗೆ ಮನೆ, ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಕುಟುಂಬಸ್ಥರ ಆಶ್ರಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೀತ ವ್ಯವಸ್ಥೆಯಲ್ಲಿ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಆದಿವಾಸಿಗಳು ದುಡಿದ ಕೂಲಿ ಪಡೆದುಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಭೂಮಾಲೀಕರಿಗೆ ಸಾಲದ ಮೊರೆ ಹೋಗಿ ಸಾಲದ ಹೆಸರಿನಲ್ಲಿ ಎರಡು ಮೂರು ತಲೆಮಾರುಗಳು ಮಾಡಿದ ಸಾಲದ ಕಾರಣದಿಂದಾಗಿ ಕನಿಷ್ಠ ಕೂಲಿಯಾಗಲಿ, ಕಾರ್ಮಿಕರ ಕಾನೂನಿನಡಿ ನೀಡಬೇಕಾಗಿರುವ ಯಾವುದೇ ಸೌಲಭ್ಯಗಳು ಪಡೆಯಲು ಸಾಧ್ಯವಾಗುತ್ತಿಲ್ಲ. ಜತೆಗೆ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಗಳಿಂದ ಆದಿವಾಸಿಗಳು ವಿಮೋಚನೆಯಾಗಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನಿವೇಶನ ರಹಿತ ಆದಿವಾಸಿಗಳಿಗೆ ನಿವೇಶನ, ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಭೂಮಿ ಮತ್ತು ಅರಣ್ಯದ ಮೇಲೆ ಆದಿವಾಸಿಗಳ ಹಕ್ಕುಗಳನ್ನು ಗುರುತಿಸಬೇಕು. ಆದಿವಾಸಿಗಳ ಮೇಲಿನ ಎಲ್ಲಾ ರೀತಿಯ ಕಿರುಕುಳವನ್ನು ನಿಲ್ಲಿಸಬೇಕು. ಆ.೯ ರಂದು ಆದಿವಾಸಿ ದಿವಸ್(ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನ) ಅನ್ನು ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ನಿರತರು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಕೊಡಗು ಜನರಲ್ ವರ್ಕರ್ಸ್ ಯೂನಿಯನ್‌ನ ಅಧ್ಯಕ್ಷ ಎಚ್.ಬಿ.ರಮೇಶ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕರಾದ ಜೆ.ಆರ್.ಪ್ರೇಮ, ಸದಸ್ಯರಾದ ಪಿ.ಕೆ.ರಮೇಶ್, ಪಿ.ಕೆ.ಮಣಿ, ವೈ.ರಘು, ಭಾಗ್ಯ, ಪಿ.ಬಿ.ಬೋಜ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:
error: Content is protected !!