Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಶಿಶು ಮರಣ ತಡೆಗೆ ಹೆಚ್ಚಿನ ಜಾಗೃತಿ ಮೂಡಿಸಿ :ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಸೂಚನೆ

ಮಡಿಕೇರಿ: ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಶಿಶು ಮತ್ತು ತಾಯಿ ಮರಣ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಶಿಶು ಮತ್ತು ತಾಯಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು. ಉತ್ತಮ ಆರೋಗ್ಯವಿದ್ದಲ್ಲಿ ಕುಟುಂಬ ನಿರ್ವಹಣೆ ಚೆನ್ನಾಗಿರುತ್ತದೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಜಿಲ್ಲೆಯ ಹಾಡಿಗಳು ಸೇರಿದಂತೆ ಎಲ್ಲೆಡೆ ಆರೋಗ್ಯ ಮತ್ತು ಶುಚಿತ್ವ ಬಗ್ಗೆ ಜಾಗೃತಿ ಮೂಡಿಸಬೇಕು. 5 ವರ್ಷದೊಳಗಿನ ಮಕ್ಕಳಿಗೆ ಕಾಲಕಾಲಕ್ಕೆ ಚುಚ್ಚುಮದ್ದು ಕೊಡಿಸುವಂತಾಗಲು ಅರಿವು ಮೂಡಿಸಬೇಕು. ಹಾಗೆಯೇ ಗರ್ಭಿಣೀಯರು ಸಹ ಕಾಲ ಕಾಲಕ್ಕೆ ಆರೋಗ್ಯ ಪರಿಶೀಲಿಸಿಕೊಳ್ಳಬೇಕು ಎಂದರು.

ಜಿಲ್ಲಾ ಚುಚ್ಚುಮದ್ದು ಅಧಿಕಾರಿ ಡಾ.ಮಧುಸೂದನ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಜುಲೈ ಮಾಹೆಯಿಂದ ಅಕ್ಟೋಬರ್ ಅಂತ್ಯದವರೆಗೆ 5 ವರ್ಷದೊಳಗಿನ 15 ಶಿಶುಗಳು ವಿವಿಧ ಕಾರಣಗಳಿಂದ ಸಾವು ಸಂಭವಿಸಿದೆ ಎಂದರು.

ಈ 15 ಶಿಶುಗಳಲ್ಲಿ 7 ಪ್ರಕರಣಗಳು ಅವಧಿ ಪೂರ್ವ ಜನನ, ಅನುವಂಶೀಯ ಕಾರಣಗಳು ಹಾಗೂ ಜನನ ಸಂದರ್ಭದಲ್ಲಿ ರಕ್ತಸ್ರಾವ ಸಂಭವಿಸಿದ ಉಸಿರಾಟದ ತೊಂದರೆಯಿಂದ ಸಾವು. ಉಳಿದಂತೆ ನಾಟಿ ಔಷಧಿ ಕುಡಿಸಿ, ಜ್ವರ, ಶೀತ, ಕೆಮ್ಮು ಬಂದು ಮಕ್ಕಳ ಸಾವು ಸಂಭವಿಸಿದೆ. ಗರ್ಭಿಣೀಯರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದಿರುವುದು ಹೀಗೆ ಹಲವು ಕಾರಣಗಳಿಂದ ಸಾವು ಸಂಭವಿಸಿದೆ. ಜಿಲ್ಲೆಯಲ್ಲಿ ಶೇ.87 ಕ್ಕೂ ಹೆಚ್ಚು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಆರೋಗ್ಯ ಮತ್ತು ಪರಿಸರ ಶುಚಿತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ ನಾಯಿ ಕಡಿತ ಪ್ರಕರಣಗಳು 4,356, ಹಾವು ಕಡಿತ ಪ್ರಕರಣಗಳು 297, ಅತಿಸಾರ ಬೇಧಿ 2,427 ಪ್ರಕರಣಗಳು, ಡೆಂಗ್ಯೂ 272, ಇಲಿಜ್ವರ 13, ಕಾಲರಾ ಮತ್ತು ಮಲೇರಿಯಾ ತಲಾ 3 ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಸಹ ಗುಣಮುಖರಾಗಿದ್ದಾರೆ. ನಾಯಿ ಮತ್ತು ಹಾವು ಕಡಿತಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.

ಯಾವುದೇ ಪ್ರಾಣಿ ಕಚ್ಚಿದರೂ ಸಹ ಉದಾಸೀನ ಮಾಡದೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವಂತಾಗಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.

ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ತಾಲ್ಲೂಕು ವೈದ್ಯಾಕಾರಿಗಳಾದ ಡಾ.ಯತಿರಾಜು, ಡಾ.ಚೇತನ್, ಸ್ತ್ರೀ ಆರೋಗ್ಯ ತಜ್ಞರಾದ ಡಾ.ಸೋಮಶೇಖರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಪಶುಪಾಲನ ಇಲಾಖೆ ಉಪ ನಿರ್ದೇಶಕ ಲಿಂಗರಾಜು ದೊಡ್ಡಮನಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಗಾಯತ್ರಿ, ಆಹಾರ ಸುರಕ್ಷತೆ ವಿಭಾಗದ ಮಂಜುನಾಥ್, ಜಿ.ಪಂ.ಇಇ ನಾಯಕ್, ವಿವಿಧ ಇಲಾಖಾ ಅಧಿಕಾರಿಗಳು ಇತರರು ಇದ್ದರು.

Tags: