Mysore
33
scattered clouds

Social Media

ಸೋಮವಾರ, 06 ಏಪ್ರಿಲ 2026
Light
Dark

ಇರಾನ್‌ಗೆ ತೆರಳಲಾಗದೆ ಕೊಡಗಿನಲ್ಲಿ ಸಿಲುಕಿದ ದಂಪತಿ

ಚೆಟ್ಟಳ್ಳಿ: ಯುದ್ಧ ಪರಿಸ್ಥಿತಿಯಿಂದಾಗಿ ದಂಪತಿ ಇರಾನ್‌ಗೆ ಮರಳಲಾಗದೆ ಕೊಡಗು ಜಿಲ್ಲೆಯ ಮೂರ್ನಾಡು ಸಮೀಪದ ಕಾಂತೂರಿನಲ್ಲಿ ಪರಿತಪಿಸುವಂತಾಗಿದೆ.

ಕಾಂತೂರು ನಿವಾಸಿ ಪತ್ನಿ ನವೀನ ಹಾಗೂ ಇರಾನ್ ಮೂಲದ ಪತಿ ನಾದರ್ ಕೊಡಗಿನಲ್ಲಿಯೇ ಸಿಲುಕಿರುವ ದಂಪತಿ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಹಲವು ದೇಶಗಳ ವಾಯು ಪ್ರದೇಶ ಬಂದ್ ಆಗಿದ್ದು, ವಿಮಾನ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ದಂಪತಿ ಕೊಡಗಿನಲ್ಲಿಯೇ ಉಳಿಯುವಂತಾಗಿದೆ.

ಕೊಡಗಿನ ನವೀನ ಅವರು ಸುಮಾರು ೪೦ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇರಾನಿನ ಪ್ರಜೆ ನಾದರ್ ಅವರೊಂದಿಗೆ ಪರಿಚಯವಾಗಿ ಬಳಿಕ ವಿವಾಹವಾಗಿದ್ದರು. ವಿವಾಹದ ನಂತರ ದಂಪತಿ ಇರಾನಿನ ಬೋಜ್‌ನೂರ್ ಪ್ರದೇಶದಲ್ಲಿ ನೆಲೆಸಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬರು ಸಿವಿಲ್ ಇಂಜಿನಿಯರ್ ಆಗಿದ್ದು, ಮತ್ತೊಬ್ಬರು ಆರ್ಕಿಟೆಕ್ಟ್ ಆಗಿದ್ದಾರೆ.

ಈ ಕುಟುಂಬವು ಇರಾನಿನಲ್ಲಿ ದಾಳಿಂಬೆ, ಗ್ರೇಪ್, ಆಪಲ್, ಬ್ಲೂಬೆರಿ, ಬಾದಾಮಿ, ಏಪ್ರಿಕೋಟ್, ಖರ್ಜೂರ, ಪಿಸ್ತಾ ಸೇರಿದಂತೆ ಹಲವು ವಿದೇಶಿ ಹಣ್ಣುಗಳ ಫಾರ್ಮ್‌ಗಳನ್ನು ಹೊಂದಿದ್ದು, ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಕೊಡಗಿಗೆ ಬರುವ ಈ ದಂಪತಿ, ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಮರಳಿ ಇರಾನ್‌ಗೆ ತೆರಳುತ್ತಿದ್ದರು.

ಈ ಬಾರಿ ಡಿಸೆಂಬರ್‌ನಲ್ಲಿ ಕೊಡಗಿಗೆ ಬಂದಿದ್ದ ಇವರು ಮಾ.೧೬ರಂದು ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್‌ನ ಬೋಜ್‌ನೂರ್‌ಗೆ ತೆರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಆದರೆ ಇಸ್ರೇಲ್, ಅಮೆರಿಕಾ-ಇರಾನ್ ಯುದ್ಧದ ಪರಿಣಾಮವಾಗಿ ವಿಮಾನ ರದ್ದುಪಡಿಸಲಾಯಿತು. ನಂತರ ಏಪ್ರಿಲ್ ೧೫ರಂದು ಮತ್ತೊಮ್ಮೆ ಪ್ರಯಾಣ ಬುಕ್ ಮಾಡಿದ್ದರೂ, ಆ ವಿಮಾನವೂ ರದ್ದಾಗಿದೆ.

ಇರಾನ್‌ಗೆ ತೆರಳುವಲ್ಲಿ ಇನ್ನಷ್ಟು ವಿಳಂಬವಾದರೆ ಮೇ ತಿಂಗಳಲ್ಲಿ ಇವರ ಪಾಸ್‌ಪೋರ್ಟ್ ಅವಧಿ ಮುಗಿಯುವ ಆತಂಕವೂ ಎದುರಾಗಿದೆ. ಇದಕ್ಕೂ ಮೀರಿ, ಯುದ್ಧ ಪರಿಸ್ಥಿತಿಯಿಂದ ಇರಾನಿನಲ್ಲಿ ಇಂಟರ್‌ನೆಟ್ ಸೇವೆಗಳು ಬಹುತೇಕ ಸ್ಥಗಿತಗೊಂಡಿರುವುದರಿಂದ ಅಲ್ಲಿ ಇರುವ ತಮ್ಮ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲವೆಂದು ನವೀನ್ ಹಾಗೂ ನಾದರ್ ದಂಪತಿ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ವಾರಗಳಲ್ಲಿ ಇರಾನಿನಲ್ಲಿ ಇಂಟರ್‌ನೆಟ್ ಸಂಪರ್ಕ ತೀವ್ರವಾಗಿ ಕುಸಿದಿರುವ ವರದಿಗಳೂ ಹೊರಬಿದ್ದಿವೆ.

ಈ ಅನಿರೀಕ್ಷಿತ ಪರಿಸ್ಥಿತಿಯಿಂದ ತಮ್ಮ ವ್ಯವಹಾರ, ಕುಟುಂಬ ಹಾಗೂ ಪ್ರಯಾಣ ಯೋಜನೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ ಎಂದು ದಂಪತಿ ನೋವು ವ್ಯಕ್ತಪಡಿಸಿದ್ದಾರೆ.

ವಿಶೇಷ ವರದಿ: ಪುತ್ತರಿರ ಕರುಣ್ ಕಾಳಯ್ಯ

 

Tags:
error: Content is protected !!