ವಿರಾಜಪೇಟೆ : ಅಪ್ರಾಪ್ತ ಪುತ್ರನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಮತ್ತು ವಾಹನದ ಮಾಲೀಕರಾದ ತಂದೆಯ ಮೇಲೂ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿರಾಜಪೇಟೆ ಬಿಟ್ಟಂಗಾಲ ಗ್ರಾಮದ ಅಂಬಟ್ಟಿ ನಿವಾಸಿ ವಾಹನ ಮಾಲೀಕ ಟಿ.ಆರ್. ಪ್ರಭಾಕರ್(೫೩) ಮತ್ತು ವಾಹನ ಚಾಲನೆ ಮಾಡಿದ ಅಪ್ರಾಪ್ತ ಟಿ.ಆರ್. ಪ್ರಭಾಕರ ಪುತ್ರ ಟಿ.ಪಿ. ಅನಲ್(೧೬) ಕಾನೂನು ಕ್ರಮಕ್ಕೆ ಒಳಗಾದವರು.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಎನ್.ಜೆ.ಲತಾ ಮತ್ತು ಸಿಬ್ಬಂದಿ ಬಿಟ್ಟಂಗಾಲ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ಕೈಗೊಂಡಿದ್ದರು. ಈ ವೇಳೆ ಅಪ್ರಾಪ್ತ ಸಿಕ್ಕಿಬಿದ್ದಿದಾನೆ.
ವಾಹನ ದಾಖಲೆಗಳು ಆತನ ತಂದೆಯ ಹೆಸರಿನಲ್ಲಿದ್ದು, ಅಪ್ರಾಪ್ತ ಎಂದು ತಿಳಿದಿದ್ದರೂ ವಾಹನ ಚಾಲನೆಗೆ ನೀಡಿರುವುದು ಕಾನೂನು ಬಾಹಿರವಾಗಿರುವ ಹಿನ್ನೆಲೆಯಲ್ಲಿ ಹೊಂಡ ಆಕ್ಟೀವಾ ಸ್ಕೂಟರ್ ಅನ್ನು ವಶಕ್ಕೆ ಪಡೆದು ಮಾಲೀಕರಿಗೆ ಹಾಗೂ ಸವಾರನ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.




