ಮಡಿಕೇರಿ: ತಾಂತ್ರಿಕ ದೋಷದಿಂದ ಕಾರೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಘಟನೆ ನಗರದ ಹೊರವಲಯದ ಸಂಪಿಗೆಕಟ್ಟೆ ಬಳಿ ನಡೆದಿದೆ.
ಮಡಿಕೇರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಬೆಳಿಗ್ಗೆ ಅಪಘಾತವಾಗಿ ರಸ್ತೆ ಬದಿ ನಿಲ್ಲಿಸಲಾಗಿತ್ತು. ಶ್ರೀನಿವಾಸ್ ಎಂಬವರಿಗೆ ಸೇರಿದ ಕಾರಿನಲ್ಲಿ ಸಂಜೆ ವೇಳೆಗೆ ತಾಂತ್ರಿಕ ದೋಷದಿಂದ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಅಷ್ಟರಲ್ಲಾಗಲೇ ಕಾರು ಬಹುತೇಕ ಬೆಂಕಿಗಾಹುತಿಯಾಗಿತ್ತು. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಸ್ಥಳಕ್ಕೆ ಮಡಿಕೇರಿ ನಗರ ಹಾಗೂ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.





