ಕೊಡಗು: ಆಟೋದಲ್ಲಿ ಮಲಗಿರುವಾಗಲೇ ಚಾಲಕರೋರ್ವರು ಪ್ರಾಣಬಿಟ್ಟ ಘಟನೆಯೊಂದು ಶನಿವಾರಸಂತೆಯಲ್ಲಿ ನಡೆದಿದೆ.
ಆಟೋ ಚಾಲಕ ಮಂಜುನಾಥ್ ಎಂಬುವವರೇ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ.
ಸಿದ್ಧಲಿಂಗಪುರದ ನಿವಾಸಿಯಾಗಿದ್ದ ಮಂಜುನಾಥ್, ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ವಾಸವಿದ್ದರು.
ಪ್ರತಿನಿತ್ಯ ಆಟೋದಲ್ಲೇ ಮಲಗಿ, ಆಟೋ ನಿಲ್ದಾಣದಲ್ಲಿ ರಾತ್ರಿ ಕಳೆಯುತ್ತಿದ್ದರು. ಅದರಂತೆ ನಿನ್ನೆಯೂ ಸಹ ಆಟೋದಲ್ಲೇ ಮಲಗಿದ್ದರು. ಇಂದು ಬೆಳಗ್ಗೆ ಇತರೆ ಆಟೋ ಚಾಲಕರು ಬಂದು ನೋಡಿದಾಗ ಆಟೋದಲ್ಲೇ ಪ್ರಾಣ ಬಿಟ್ಟಿರುವ ವಿಷಯ ತಿಳಿದು ಬಂದಿದೆ.
ಮೃತ ಮಂಜುನಾಥ್ ವಿವಾಹವಾಗಿದ್ದು, ಮನೆಯಲ್ಲಿ ಮನಸ್ತಾಪ ಇದ್ದ ಕಾರಣ ಕುಟುಂಬದಿಂದ ದೂರ ಉಳಿದಿದ್ದರು ಎನ್ನಲಾಗಿದೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





