Mysore
26
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮಡಿಕೇರಿ| ನಿಧಿ ಆಸೆಗೆ ಮನೆಯ ಕೋಣೆ ಅಗೆದ ಐವರ ಬಂಧನ

ಮಡಿಕೇರಿ: ನಿಧಿಯ ಆಸೆಗೆ ಜೋತುಬಿದ್ದು ವಾಸದ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶೋಧಿಸಿದ ಆರು ಮಂದಿಯ ವಿರುದ್ದ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಜಿ. ಕಾಲೋನಿ ನಿವಾಸಿ ಆಸೀಫ್ (30) ಎಂಬಾತ ಹಣದ ಆಸೆಗೆ ತನ್ನ ಮನೆಯಲ್ಲಿ ನಿಧಿ ಇದೆ ಎಂದು ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಇದೀಗ ಸೆರೆಮನೆ ಸೇರಿದ ಆರೋಪಿಯಾಗಿದ್ದಾನೆ.

ಈತನ ಮನೆಯಲ್ಲಿ ಪ್ರತಿನಿತ್ಯ ನಾಗರಹಾವು ಕಾಣಿಸಿಕೊಳ್ಳುತ್ತಿದ್ದು ಈ ವಿಚಾರವನ್ನು ತನ್ನ ಸ್ನೇಹಿತನಾದ ಮೂರ್ನಾಡ್ ನ ಆತೀಕ್ ಎಂಬಾತನ ಬಳಿ ಹೇಳಿದ ಹಿನ್ನೆಲೆಯಲ್ಲಿ ಆತ ಕಾಸರಗೋಡು ನಿಂದ ಓರ್ವ ಉಸ್ತಾದ್ ನನ್ನು ಕರೆಸಿದ್ದಾನೆ. ಉಸ್ತಾದ್ ಪ್ರಾರ್ಥನೆ ಮಾಡಿದ ಸಂದರ್ಭದಲ್ಲಿ ಮನೆಯ ಮೂರನೇ ಕೋಣೆಯಲ್ಲಿ ನಿಧಿ ಇರುವುದಾಗಿ ಯಂತ್ರದ ಪರಿಶೋಧನೆಯಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾನೆ. ಆವಾಗ ಕೋಣೆಯಲ್ಲಿ ಗುಂಡಿ ತೋಡಲು ಶುರು ಮಾಡಿ, ಯಂತ್ರದಲ್ಲಿ ಪರಿಶೀಲನೆ ಮಾಡಿದಾಗ ನಿಧಿ ಇರುವ ಯಾವುದೇ ಶಬ್ದ ಬಾರದ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ತೆರಳಿದ್ದಾರೆ.

ತದನಂತರ ಆಸೀಫ್ ಈ ವಿಚಾರವನ್ನು ಕುಶಾಲನಗರದ ಆರೀಫ್ ಮತ್ತು ಮಡಿಕೇರಿಯ ಫಾಹೀದ್ ಎಂಬುವವರ ಬಳಿ ಹೇಳಿದ ಹಿನ್ನೆಲೆ, ಮಾಟಮಂತ್ರ ಮಾಡಿಸಿದರೆ ನಿಧಿ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಮಾಟಮಂತ್ರ ಮಾಡಿಸಲೆಂದು ತಮಿಳುನಾಡಿನಿಂದ ಕರ್ಪಸ್ವಾಮಿ ಎಂಬ ಮಾಂತ್ರಿಕನನ್ನು ಹಾಗೂ ಆತನೊಂದಿಗೆ ಮೂವರನ್ನು ಕರೆಸಿದ್ದಾನೆ. ನಿರಂತರವಾಗಿ 35 ದಿನಗಳ ಕಾಲ ಪೂಜೆ ನೆರವೇರಿಸಿ ನಂತರ ಕೋಳಿ ಬಲಿ ನೀಡಿದರೆ ನಿಧಿ ಸಿಗಲಿದೆ ಎಂದು ಮಾಂತ್ರಿಕ ಹೇಳಿದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಪೂಜೆ ನೆರವೇರತೊಡಗಿದವು.

ಈ ಮನೆಯಲ್ಲಿ ಅಕ್ರಮವಾಗಿ ನಿಧಿ ಶೋಧ ಕಾರ್ಯ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಕೋಣೆಯಲ್ಲಿ ಗುಂಡಿ ತೋಡಿರುವುದು ಹಾಗೂ ಪೂಜೆ ನಡೆಸಿರುವುದು ಪತ್ತೆಯಾಗಿದೆ.

ಈ ವೇಳೆ ಪೊಲೀಸರು ಆಸೀಫ್ ನನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ನಿಧಿಯ ಆಸೆಗೆ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆ ಎಸಗಿದ ಪ್ರಕರಣದಲ್ಲಿ ಭಾಗಿಯಾದ 6 ಮಂದಿಯ ವಿರುದ್ದ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ವಾಮಾಚಾರ ಇವುಗಳ ಪ್ರತಿಬಂಧಕ ಮತ್ತು ನಿರ್ಮೂಲನೆ ಅಧಿನಿಯಮ 2017ರ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.

 

Tags:
error: Content is protected !!