ಮಡಿಕೇರಿ : ನವೆಂಬರ್ ಅಂತ್ಯದೊಳಗೆ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಸಂದರ್ಭ ಶಾಸಕರಿಗೆ, ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ವೇಣುಗೋಪಾಲ್, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.
ಎರಡು ಮೂರು ಸುತ್ತು ಮಾತುಕತೆ ಆಗಿದೆ. ಪಕ್ಷ ಅಧಿಕಾರಕ್ಕೆ ಬಂದಾಗ ಅಧ್ಯಕ್ಷರಾಗಬೇಕು, ಶಾಸಕರಾಗಬೇಕು, ಮಂತ್ರಿ ಆಗಬೇಕೆಂಬ ಆಸೆ ಸಹಜ. ಪಕ್ಷಕ್ಕಾಗಿ ದುಡಿದವರಿಗೆ ಹಂತ ಹಂತವಾಗಿ ಸ್ಥಾನವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಚೆಲುವರಾಯಸ್ವಾಮಿ, ಅದನ್ನು ಹೈಕಮಾಂಡ್, ಪಕ್ಷದ ಅಧ್ಯಕ್ಷರು, ಸಿಎಂ ತೀರ್ಮಾನ ಮಾಡುತ್ತಾರೆ. ಅದು ನಮ್ಮ ಕೆಲಸ ಅಲ್ಲ. ಸಣ್ಣಪುಟ್ಟ ಅಸಮಾಧಾನ ಎಲ್ಲಾ ಕಡೆ ಇರುತ್ತದೆ. ಅದನ್ನು ಸರಿಪಡಿಸುವ ಶಕ್ತಿ ಪಕ್ಷಕ್ಕೆ ಇದೆ ಎಂದರು.
ಮುಸ್ಲಿಂ ಸಮುದಾಯದ ಮತದಿಂದ ಕಾಂಗ್ರೆಸ್ ಸರ್ಕಾರ ಬಂದಿದೆ ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲಾ ಕಮ್ಯುನಿಟಿಯವರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜ್ಯದ ಆರು ಕೋಟಿ ಜನರಿಗೂ ಅಭಿನಂದನೆ ಸಲ್ಲಿಸಿದ್ದೇವೆ. ಅವರವರ ಕಮ್ಯುನಿಟಿ ಬಗ್ಗೆ ಅವರು ಹೇಳುವುದರಲ್ಲಿ ತಪ್ಪಿಲ್ಲ ಎಂದರು.





