ಕೊಡಗು: ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆಯನ್ನು ಅನೂಪ್ ಕುಮಾರ್ ಸುಂಟಿಕೊಪ್ಪ ಹಿಂಪಡೆದಿದ್ದಾರೆ.
ಫೆಬ್ರವರಿ.7ರಂದು ಅನೂಪ್ ಕುಮಾರ್ ತಮ್ಮ ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಮತ್ತು ಸುಂಟಿಕೊಪ್ಪ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದೀಗ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಧ್ಯಸ್ಥಿಕೆಯಲ್ಲಿ ಎಲ್ಲಾ ಗೊಂದಲಗಳು ಶಮನವಾಗಿದ್ದು ತಾನು ನೀಡಿದ ರಾಜೀನಾಮೆಯನ್ನು ಹಿಂಪಡೆದಿದ್ದೇನೆ ಎಂದು ಅನೂಪ್ ಕುಮಾರ್ ಸುಂಟಿಕೊಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಅನೂಪ್ ಕುಮಾರ್ ಗೆಲುವು ಸಾಧಿಸಿದ್ದಾರೆ.
ಫೆಬ್ರವರಿ.7ರಂದು ಯುವ ಕಾಂಗ್ರೆಸ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿತ್ತು. ಇದೀಗ ಅನೂಪ್ ಕುಮಾರ್ ರಾಜೀನಾಮೆ ಹಿಂಪಡೆದಿರುವುದರಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸದಸ್ಯತ್ವವನ್ನು ಮುಂದುವರೆಸಲಾಗಿದೆ.





