Mysore
20
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಮರಸುಳ್ಯ ಹೋರಾಟವೇ ಭಾರತದ ಪ್ರಪ್ರಥಮಮ ಸ್ವಾತಂತ್ರ್ಯ ಹೋರಾಟ: ಸಹನಾ ಕಾಂತಬೈಲು

ಮಡಿಕೇರಿ: ಭಾರತದ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾದದ್ದು ಕೊಡಗು ಜಿಲ್ಲೆಯಿಂದ. 1837 ರಲ್ಲಿ ನಡೆದ ಅಮರಸುಳ್ಯ ಹೋರಾಟವೇ ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ. ಆಗ ಸುಳ್ಯ ಪ್ರದೇಶವು ಕೊಡಗು ಜಿಲ್ಲೆಗೆ ಸೇರಿತ್ತು ಎಂದು ಜಿಲ್ಲೆಯ ಹಿರಿಯ ಸಾಹಿತಿ ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸಹನಾ ಕಾಂತಬೈಲು ನುಡಿದರು.

ಅವರು ಇಂದು(ಆ.11) ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಯೋತಿ ವಿದ್ಯಾ ಸಂಘ ಪೆರಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಪೆರಾಜಿಯ ಜ್ಯೋತಿ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ದಿ. ಗಂಗಾಧರ ಶೇಟ್ ಮತ್ತು ಸುಲೋಚನಾ ಬಾಯಿ ಸ್ಮಾರಕ ದತ್ತಿ ಕಾರ್ಯಕ್ರಮದ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.

1857 ರಲ್ಲಿ ನಡೆದ ಸಿಪಾಯಿ ದಂಗೆ ಭಾರತದ ಮೊದಲ ಸ್ವಾತಂತ್ರ ಹೋರಾಟ ಎಂದು ಇತಿಹಾಸ ನಿರ್ಮಿಸಲಾಗಿದೆ. ಆದರೆ ಅದಕ್ಕೂ 20 ವರ್ಷಗಳ ಹಿಂದೆ ಬ್ರಿಟೀಷರನ್ನು ನಮ್ಮ ನೆಲದಿಂದ ಓಡಿಸುವ ಪ್ರಯತ್ನ ನಡೆದಿದೆ. ಕೊಡಗಿನ ರಾಜ ಚಿಕ್ಕವೀರರಾಜೇಂದ್ರ ಅವರನ್ನು ಬ್ರಿಟಿಷರು ರಾಜಪಟ್ಟದಿಂದ ಇಳಿಸಿದ ನಂತರ ಬ್ರಿಟಿಷ್ ಆಳ್ವಿಕೆ ಈ ಪ್ರದೇಶದಲ್ಲಿ ಪ್ರಾರಂಭವಾಯಿತು. ಅತಿಯಾದ ತೆರಿಗೆ ಮತ್ತು ದಬ್ಬಾಳಿಕೆ ಕಾರಣ ಜನರು ಬ್ರಿಟಿಷರ ವಿರುದ್ಧ ದಂಗೆ ಏಳುವ ಪ್ರಯತ್ನ ನಡೆಯಿತು. ಆ ಸಂದರ್ಭದಲ್ಲಿ ರಾಜಮನೆತನದ ಪ್ರತಿನಿಧಿ ಹೇಳಿಕೊಂಡು ಸ್ವಾಮಿ ಅಪರಾಂಪರ ಎನ್ನುವ ವ್ಯಕ್ತಿ ಇವರೆಲ್ಲರೂ ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡಿ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ ತಮ್ಮ ಧ್ವಜವನ್ನು ಏರಿಸಿ, 13 ದಿನಗಳ ಕಾಲ ಬ್ರಿಟಿಷರನ್ನು ನಮ್ಮ ನೆಲದಿಂದ ಹೊರಗಿಡುತ್ತಾರೆ ನಂತರ ಬ್ರಿಟಿಷರು ಬಹು ದೊಡ್ಡ ಸೈನ್ಯದೊಂದಿಗೆ ಬಂದು ಇವರನ್ನು ನಿಯಂತ್ರಣಕ್ಕೆ ತರುತ್ತಾರೆ ಎಂದು ಕೊಡಗಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಮೆಲುಕು ಹಾಕಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್, 200 ವರ್ಷಗಳಿಗೂ ಹೆಚ್ಚು ನಮ್ಮನ್ನು ಆಳಿದ ಬ್ರಿಟಿಷರ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಿ ಸ್ವಾತಂತ್ರವನ್ನು ಗಳಿಸಿಕೊಂಡಿತು. ನಮ್ಮ ಕೊಡಗು ಜಿಲ್ಲೆ ಏನು ಆ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಆದರೆ ಮಾಹಿತಿಯ ಕೊರತೆಯಿಂದಾಗಿ ನಮ್ಮ ಜಿಲ್ಲೆಯಲ್ಲಿ ನಡೆದಂತಹ ಸ್ವಾತಂತ್ರದ ಹೋರಾಟಗಳು ಜನರನ್ನು ತಲುಪಲಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದಂತಹ ವಸ್ತು ಅಲ್ಲ ಅದರ ಹಿಂದೆ ಇರುವಂತಹ ತ್ಯಾಗ ಬಲಿದಾನ ಹೋರಾಟಗಳು ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು ಎನ್ನುವ ದೃಷ್ಟಿಯಿಂದ ಗೋಣಿಕೊಪ್ಪಲಿನ ಎಂ.ಜಿ ಮೋಹನ್ ಅವರು ಅವರ ತಂದೆ ತಾಯಿಗಳ ಹೆಸರಿನಲ್ಲಿ ಈ ದತ್ತಿಯನ್ನು ಸ್ಥಾಪಿಸಿದ್ದಾರೆ ಎಂದರು.

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಪೆರಾಜೆಯ ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ಎನ್ ಎ ಜ್ಞಾನೇಶ್ ರವರು ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಮತ್ತು ಅದು ಸಿಗುವಲ್ಲಿ ನಮ್ಮ ಹಿರಿಯರುಮಾಡಿದ ತ್ಯಾಗ ಬಲಿದಾನದ ಕುರಿತು ಮಾಹಿತಿ ನೀಡುವ ಈ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಎಂದರು.

ದತ್ತಿದಾನಿಗಳಾದ ಗೋಣಿಕೊಪ್ಪಲಿನ ಜಯಲಕ್ಷ್ಮಿ ಜ್ಯುವೆಲರಿ ಮಾಲೀಕರಾದ ಎಂ.ಜಿ ಮೋಹನ್ ರವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ ಮೋಹನ್ ಬ್ರಿಟಿಷರ ಆಳ್ವಿಕೆಯ ದಬ್ಬಾಳಿಕೆಯ ನಂತರ ನಮ್ಮ ದೇಶಕ್ಕೆ ಸಿಕ್ಕಂತಹ ಈ ಸ್ವಾತಂತ್ರ್ಯ ಅದರ ಮೌಲ್ಯ ಇಂದಿನ ಪೀಳಿಗೆಗೆ ತಿಳಿಯಬೇಕು ಎನ್ನುವ ನಿಟ್ಟಿನಲ್ಲಿ ತಾವು ತಮ್ಮ ತಂದೆ ತಾಯಿಯರ ಹೆಸರಿನಲ್ಲಿ ಈ ದತ್ತಿನಿಧಿ ಸ್ಥಾಪಿಸಿದ್ದು ಸಾಹಿತ್ಯ ಪರಿಷತ್ತು ಪ್ರತಿ ವರ್ಷವೂ ಈ ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿದೆ. ಈ ಒಂದು ಅವಕಾಶ ನೀಡಿದ ಸಾಹಿತ್ಯ ಪರಿಷತ್ತಿಗೆ ತಾನು ಧನ್ಯ ಎಂದರು.

ವೇದಿಕೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್, ಪೆರಾಜೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಸುರೇಶ್ ಪೆರುಮುಂಡ, ಜ್ಯೋತಿ ಪ್ರೌಢಶಾಲೆಯ ಸಂಚಾಲಕರಾದ ಮುಡುಕಜೆ ಹರಿಶ್ಚಂದ್ರ, ಮುಖ್ಯೋಪಾಧ್ಯಯರಾದ ಶ್ರೀ ನಾಗರಾಜ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ರೇವತಿ ರಮೇಶ್, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರು ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು ಉಪಸ್ಥಿತರಿದ್ದರು.

Tags: