ಮಡಿಕೇರಿ: ಮಡಿಕೇರಿಯ ಹಲವು ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ 32 ಕಾಡಾನೆಗಳನ್ನು ಮರಳಿ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮಡಿಕೇರಿ ಕಾಫಿ ತೋಟಗಳ ಮಾರ್ಗದಲ್ಲಿ ತೆರಳಿದ ಅರಣ್ಯ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದಿಗಳು, ಬಾಡಗಬಾಣಂಗಾಲ ಗ್ರಾಮದ ಬಾಣಂಗಾಲ ಎಸ್ಟೇಟ್‌ನಿಂದ ಮಾರ್ಗೊಳ್ಳಿ ಎಸ್ಟೇಟ್ ಮೂಲಕ ಕಾಡಾನೆಗಳನ್ನು ಕಾಡಿಗೆ ಓಡಿಸಿದ್ದಾರೆ.
ಸುಮಾರು 8 ಕಿಲೋ ಮೀಟರ್ ದೂರದಲ್ಲಿರುವ ಮಾಲ್ದಾರೆ ಅರಣ್ಯಕ್ಕೆ 32 ಆನೆಗಳ ಹಿಂಡನ್ನು ಪಟಾಕಿ ಸಿಡಿಸಿ ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 32 ಆನೆಗಳು ಹಲವು ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ ಕಾರ್ಮಿಕರು ಹಾಗೂ ಬೆಳೆಗಾರರಿಗೆ ಆತಂಕವನ್ನು ಸೃಷ್ಟಿಸಿದ್ದವು.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ ಬೆಳೆಗಾರರು, ಕಾಡಾನೆಗಳ ಹಾವಳಿಯನ್ನು ತಪ್ಪಿಸುವಂತೆ ಆಗ್ರಹಿಸಿದ್ದರು.
ಬೆಳೆಗಾರರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸತತ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಪಟಾಕಿ ಸಿಡಿಸಿ ಆನೆಗಳನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನೆಗಳು ಕಾಡಿಗೆ ಹೋದ ಬೆನ್ನಲ್ಲೇ ಕಾರ್ಮಿಕರು ಹಾಗೂ ಬೆಳೆಗಾರರು ತುಸು ನಿರಾಳರಾಗಿದ್ದು, ಬೆಳೆ ಕಟಾವಿಗೆ ಮುಂದಾಗಿದ್ದಾರೆ.