ಮಡಿಕೇರಿ: ಸರ್ಕಾರಿ ಕೆಲಸಕ್ಕೆ ಸೇರುವ ಪ್ರತಿಯೊಬ್ಬರು ಸರ್ಕಾರಿ ಕರ್ತವ್ಯ ಎಂದು ಭಾವಿಸದೆ ಅದನ್ನು ಜನರ ಸೇವೆ ಎಂದೇ ಪರಿಗಣಿಸಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನೂತನವಾಗಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.
ಶುಕ್ರವಾರ ವಿಧಾನ ಸೌಧದಲ್ಲಿರುವ ಪೊನ್ನಣ್ಣ ನವರ ಕಛೇರಿಗೆ ಆಗಮಿಸಿ ಆಡಳಿತಾತ್ಮಕ ಸಲಹೆ ಕೇಳಲು ಬಂದ ಸಬ್ ಇನ್ಸ್ಪೆಕ್ಟರ್ ಗಳಾಗಿ ಆಯ್ಕೆಯಾದವರಿಗೆ ಅಭಿನಂದಿಸಿ ಮಾತನಾಡಿದ ಅವರು, ಯಾವುದೇ ಸರ್ಕಾರಿ ಅಧಿಕಾರಿ ಕೆಲಸ ಆರಂಭಿಸುವಾಗ ಜನರ ಸೇವೆ ಮಾಡುತ್ತೇನೆ ಎಂಬ ಸಂಕಲ್ಪತೊಟ್ಟು ವೃತ್ತಿ ಆರಂಭಿಸಬೇಕು.
ಸಾಮಾನ್ಯ ಜನರಿಗೆ ಅಧಿಕಾರಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ಜ್ಞಾನ ಪೂರ್ಣವಾಗಿ ಇರುವುದಿಲ್ಲ. ಹಾಗಾಗಿ ಅವರನ್ನು ಅರ್ಥೈಸಿಕೊಂಡು ಕೆಲಸ ಮಾಡಬೇಕು. ಆಗ ಮಾತ್ರ ಜನಾನುರಾಗಿ ಅಧಿಕಾರಿ ಎಂದು ಗುರುತಿಸಲು ಸಾಧ್ಯ ಎಂದು ಸಲಹೆ ನೀಡಿದರು.