ಕೊಡಗು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಖುಷಿಯಲ್ಲಿದ್ದ ಬಾಲಕಿಯ ದಾರುಣ್ಯ ಹತ್ಯೆ ಜಿಲ್ಲೆಯ ಸೋಮವಾರ ಪೇಟೆಯ ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದೆ.
ಸೂರ್ಲಬ್ಬಿ ಗ್ರಾಮದ ಓಂಕಾರಪ್ಪ (32 ವರ್ಷ) ಬಾಲಕಿಯ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಸೂರ್ಲಬ್ಬಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಯು.ಎಸ್ ಮೀನಾ ಹತ್ಯೆಗೀಡಾದ ದುರ್ದೈವಿ.
ನಿನ್ನೆ (ಮೇ.9, ಗುರುವಾರ) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಅದೇ ದಿನ ತಡರಾತ್ರಿ ಬಾಲಕಿಯ ಮನೆಗೆ ನುಗ್ಗಿದ ಆರೋಪಿ ಓಂಕಾರಪ್ಪ ಯುವತಿಯನ್ನು ಎಳೆದೊಯ್ದು ನಿರ್ಜನ ಪ್ರದೇಶದಲ್ಲಿ ರುಂಡ-ಮುಂಡ ಬೇರೆಯಾಗುವಂತೆ ಕತ್ತರಿಸಿ ಹಾಕಿ, ಪರಾರಿಯಾಗಿದ್ದಾನೆ. ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರುವ ಕನಸು ಕಂಡಿದ್ದ ಮೀನಾಳನ್ನು ಆರೋಪಿ ಹತ್ಯೆ ಮಾಡಿದ್ದಾನೆ.
ಕೊಲೆಗೆ ಕಾರಣವೇನು?: ಓಂಕಾರಪ್ಪ, ಮೀನಾಳನ್ನು ಮದುವೆಯಾಗಬೇಕು ಎಂದುಕೊಂಡಿದ್ದ. ಈ ಸಂಬಂಧ ಆಕೆಯೊಂದಿಗೆ ನಿಶ್ಚಿತಾರ್ಥ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಂದ ಅಧಿಕಾರಿಗಳು ಬಾಲ್ಯ ವಿವಾಹವನ್ನು ತಡೆದು ಎರಡು ಕುಟುಂಬಗಳಿಗೂ ಬುದ್ದಿ ಹೇಳಿ ಹೋಗಿದ್ದಾರೆ. ಈ ಘಟನೆಯಿಂದ ಸಿಟ್ಟಾದ ಓಂಕಾರಪ್ಪ ಯುವತಿಯ ಮೇಲೆ ವಿಕೃತಿ ಮರೆದಿದ್ದಾನೆ.
ಈ ಹತ್ಯೆ ಸಂಬಂಧ ಹೆಚ್ಚುವರಿ ಎಸ್‌ಪಿ ಸುಂದರ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.




