ಕೊಡಗು: ಕರ್ತವ್ಯನಿರತ ಸಂಚಾರಿ ಪೊಲೀಸ್ ಪೇದೆ ಮೇಲೆ ಕಿಡಿಗೇಡಿಯೋರ್ವ ಕಾರು ಹರಿಸಲು ಯತ್ನಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿ ಹೃದಯಭಾಗದಲ್ಲಿ ಎರಡು ಶಿಫ್ಟ್ ಕಾರುಗಳ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ಜಿಟಿ ಸರ್ಕಲ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಂಜು ಎ.ಜಿ ರವರು ಸ್ಥಳಕಾಗಮಿಸಿ ಪರಿಶೀಲನೆ ನಡೆಸುವ ವೇಳೆ ಮತ್ತೋಂದು ಶಿಫ್ಟ್ ಕಾರನ್ನು ಬದಿಗೆ ಸರಿಸುವಂತೆ ಸೂಚಿಸುವ ಸಂದರ್ಭದಲ್ಲಿ ಕಾರು ಚಾಲಕ ವಾಹನವನ್ನು ನಿಲ್ಲಿಸದೇ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಮೇಲೆ ವಾಹನ ಹರಿಸಿ ತಪ್ಪಿಸಿಕೊಂಡಿದ್ದಾನೆ.
ಸಂಚಾರಿ ಪೊಲೀಸ್ ಸಿಬ್ಬಂದಿಯು ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಮೇಲೆ ಕಾರು ಹರಿಸಲು ಮುಂದಾದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆತನ ಬೆನ್ನಟ್ಟಿದರೂ ಪೊಲೀಸರ ಕಣ್ಣು ತಪ್ಪಿಸಿ ಕಾರು ಚಾಲಕ ಪರಾರಿ ಆಗಿದ್ದ. ಪೊಲೀಸ್ ಪೇದೆ ಮೇಲೆ ಕಾರು ಹರಿಸಿದ ಪ್ರಕರಣ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪರಾರಿಯಾಗಿದ್ದ ಕಾರು ಚಾಲಕ ಬಂಟ್ವಾಳ ಮೂಲದ ನಜೀರ್ ಎಂಬಾತನನ್ನು ಬಂಧಿಸಿ ಸೆರೆಮನೆಗೆ ಅಟ್ಟಿದ್ದಾರೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ನಿರ್ದೇಶನದ ಮೇರೆಗೆ ಸಂಚಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಧರ್ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಯನ್ನು ಬಂಧಿಸಿ ಸರೆಮನೆಗೆ ಅಟ್ಟಿದ್ದಾರೆ. ಪೊಲೀಸರ ಈ ಮಿಂಚಿನ ಕಾರ್ಯಚರಣೆಗೆ ಕೊಡಗು ಎಸ್ಪಿ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.