ವಿರಾಜಪೇಟೆ : ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನೂತನವಾಗಿ ಆರಂಭಿಸಲಾದ 8 ಹೊಸ ಮಾರ್ಗಗಳಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಚಾಲನೆ ನೀಡಿದರು.
ವೇಗವಾಗಿ ಬೆಳೆಯುತ್ತಿರುವ ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ಹಾಗೂ ಏರಿಕೆಯಾಗಿರುವ ಪ್ರಯಾಣಿಕರ ಸಂಖ್ಯೆಗನುಗುಣವಾಗಿ ನೂತನ ಬಸ್ ಮಾರ್ಗಗಳನ್ನು ಹಾಗೂ ಈ ಮಾರ್ಗಕ್ಕೆ ಹೆಚ್ಚುವರಿಯಾಗಿ ಎಂಟು ಹೊಸ ಬಸ್‌ಗಳು ಶಾಸಕರ ಪ್ರಯತ್ನದಿಂದಾಗಿ ದೊರಕಿದೆ.
ಈ ಸಂದರ್ಭ ಮಾತನಾಡಿದ ಶಾಸಕರು, ಆಧುನಿಕತೆ ಹಾಗೂ ನಗರೀಕರಣ ವೃದ್ಧಿಯಾದಂತೆಲ್ಲ ಜನಸಂದಣಿ ಜಾಸ್ತಿಯಾಗುವುದನ್ನು ಮನಗಂಡು ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ಮಾರ್ಗಗಳನ್ನು ಹಾಗೂ ಸುಸೂತ್ರವಾಗಿ ಪ್ರಯಾಣಿಸಲು ಹೊಸ ಬಸ್‌ಗಳನ್ನು ಈ ಭಾಗಕ್ಕೆ ಕಲ್ಪಿಸಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬಸ್‌ನ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಸ್ಥೆಗೆ ಒಳ್ಳೆಯ ಹೆಸರು ತರುವಲ್ಲಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಿದ್ದು, ಇದರಿಂದ ನಾಡಿನ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಜಾನ್ಸನ್, ವಿರಾಜಪೇಟೆ ಪುರಸಭೆಯ ಮುಖ್ಯ ಅಧಿಕಾರಿ ನಾಚಪ್ಪ, ವಿರಾಜಪೇಟೆ ಪುರಸಭೆಯ ಉಪಾಧ್ಯಕ್ಷರಾದ ಫಸಿಯಾ ತಬ್ಸುಂ ಇತರರು ಉಪಸ್ಥಿತರಿದ್ದರು.





