ಮಡಿಕೇರಿ : ಮನೆಯ ಸಾಕುನಾಯಿಗಳು ಯಾವುದೇ ವ್ಯಕ್ತಿಗಳ ಮೇಲೆ ದಾಳಿ ಮಾಡಿರುವ ಘಟನೆ ಕಂಡುಬಂದಲ್ಲಿ ಆ ನಾಯಿಯ ಮಾಲಕರ ಮೇಲೆ Section: 289 IPC ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಹಾಗೂ ಆರು ತಿಂಗಳ ಜೈಲುವಾಸ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಕೊಡಗು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಸಾಕುನಾಯಿ ದಾಳಿ ಮಾಡಿರುವ ಪ್ರಕರಣಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112ಗೆ ಕರೆ ಮಾಡುವಂತೆ ಹಾಗೂ ಕೆ.ಎಸ್.ಪಿ. ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮಾಹಿತಿ ಒದಗಿಸುವವರ ವಿವರ ಬಹಿರಂಗಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣ ದಾಖಲು : ಈ ನಡುವೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಣಂಜಗೇರಿ ಪಾರಾಣೆ ಗ್ರಾಮದಲ್ಲಿ ಬುಧವಾರ ಆರೋಗ್ಯ ಅಧಿಕಾರಿ ಕೆ.ಕೆ.ಭವ್ಯಾ ಎಂಬವರ ಮೇಲೆ ನಡೆದ ಸಾಕುನಾಯಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲಿಕ ಬಿ.ಮಾಚಯ್ಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.