Mysore
28
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಕೊಡಗಿನಲ್ಲಿ 2,454 ಕಂಬಗಳಿಗೆ ಹಾನಿ: ದುರಸ್ತಿ ಕಾರ್ಯಗಳಿಗೆ 502 ಸಿಬ್ಬಂದಿ ನಿಯೋಜನೆ

ಕೊಡಗು: ಜಿಲ್ಲೆಯಾದ್ಯಂತ ಕಳೆದ ಹತ್ತು ದಿನಗಳಿಂದ ಭಾರೀ ಮಳೆ ಮತ್ತು ಗಾಳಿಯಿಂದಾಗಿ ವಿದ್ಯುತ್ ಜಾಲಕ್ಕೆ ಹಾನಿಯಾಗುತ್ತಿದ್ದು, ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಇದರ ಮಧ್ಯೆಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಗುರುವಾರ (ಆ.1) ಸಾರ್ವಜನಿಕರಲ್ಲಿ ಸೆಸ್ಕ್ ಮನವಿ ಮಾಡಿದೆ.

ಮಳೆ, ಗಾಳಿಗೆ ಹಾನಿಗೊಳಗಾಗಿರುವ ವಿದ್ಯುತ್ ಜಾಲದ ಪುನಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, 500ಕ್ಕೂ ಹೆಚ್ಚು ಸಿಬ್ಬಂದಿ ಹಗಲಿರುಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿದ್ಯುತ್ ಪುನಸ್ಥಾಪನೆ ಕಾರ್ಯವನ್ನು ಚುರುಕುಗೊಳಿಸಲಾಗಿದ್ದು, ಇದರ ಮಧ್ಯೆಯೂ ವಿದ್ಯುತ್ ಕಂಬ ಮತ್ತು ತಂತಿಗಳು ಹಾನಿಗೊಳಲಾಗುತ್ತಿವೆ. ಮಳೆ-ಗಾಳಿ ಮಧ್ಯೆಯೂ ಸಮಸ್ಯೆ ಬಗೆಹರಿಸಲು ಸೆಸ್ಕ್ ಸಿಬ್ಬಂದಿ ಕರ್ತವ್ಯದಲ್ಲಿ ತೊಡಗಿದ್ದಾರೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.

ತೀವ್ರ ಮಳೆ ಹಾಗೂ ಗಾಳಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಈವರೆಗೆ ಒಟ್ಟು 2,454 ಕಂಬಗಳು, 46 ವಿದ್ಯುತ್ ಪರಿವರ್ತಕಗಳು ಮತ್ತು 1.72 ಕಿಲೋ ಮೀಟರ್ ತಂತಿಗಳಿಗೆ ಹಾನಿಯಾಗಿದೆ. ಈಗಾಗಲೇ 2,150 ಕಂಬಗಳನ್ನು ಹಾಗೂ ಎಲ್ಲಾ ಪರಿವರ್ತಕಗಳನ್ನು ದುರಸ್ಥಿಗೊಳಿಸಿ ವಿದ್ಯುತ್ ಮರುಸ್ಥಾಪನೆ ಮಾಡಲಾಗಿದೆ. ದಿನ ನಿತ್ಯ ಸರಾಸರಿ 100 ಕಂಬಗಳ ಬದಲಾವಣೆಯ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಮಳೆ ಹಾಗೂ ಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ಪ್ರತಿದಿನ 80-100 ಕಂಬಗಳ ಮುರಿಯುತ್ತಿರುವ ಬಗ್ಗೆ ವರದಿಯಾಗುತ್ತಿದೆ.

502 ಸಿಬ್ಬಂದಿ ನಿಯೋಜನೆ: ಮಳೆ ಹಾಗೂ ಗಾಳಿಯಿಂದ ಉಂಟಾಗಿರುವ ಹಾನಿ ಸರಿಪಡಿಸುವ ನಿಟ್ಟಿನಲ್ಲಿ 502 ಸಿಬ್ಬಂದಿಯನ್ನು ನಿಯೋಜಿಸಿ ಕಾಮಗಾರಿ ಮುಂದುವರಿಸಲಾಗಿದೆ. ವಿದ್ಯುತ್ ಜಾಲದ ದುರಸ್ಥಿ ಕಾರ್ಯವನ್ನು ಚುರುಕುಗೊಳಿಸಲು ಹಾಗೂ ವಿದ್ಯುತ್ ಜಾಲವನ್ನು ಪುನಃ ಸ್ಥಾಪಿಸಲು ಮಡಿಕೇರಿ ವಿಭಾಗದ 231 ಸಿಬ್ಬಂದಿ, ಇತರೆ ವಿಭಾಗಗಳಿಂದ, ಹೊರಗುತ್ತಿಗೆಯಿಂದ 136 ಸಿಬ್ಬಂದಿ ಹಾಗೂ 135 ವಿದ್ಯುತ್ ಗುತ್ತಿಗೆದಾರರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ಸಿಬ್ಬಂದಿ ಸಾರ್ವಜನಿಕರಿಗೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಗಮನ ವಹಿಸುವ ಸಲುವಾಗಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇವರೊಂದಿಗೆ ಜಿಲ್ಲಾಯಾದ್ಯಂತ ಮಳೆ ಹಾಗೂ ಗಾಳಿಯಿಂದ ಶಾಖಾಧಿಕಾರಿಗಳು ವಿದ್ಯುತ್ ಜಾಲದ ಮರುಸ್ಥಾಪನೆ ಕಾರ್ಯ ಮತ್ತು ಬ್ರೇಕ್ ಡೌನ್ ನಿರ್ವಹಣೆ ಕಾರ್ಯದಲ್ಲಿ ನಿರತರಾಗಿರುವುದರಿಂದ ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗ್ರಾಹಕರ ದೂರಗಳನ್ನು ದಾಖಲಿಸಿ, ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ವಿಭಾಗಕ್ಕೆ ಪ್ರತ್ಯೇಕವಾಗಿ ನೀಡಲಾಗಿರುವ ಟೋಲ್‌ ಫ್ರೀ ಸಂಖ್ಯೆ 9141038902 ಅನ್ನು ಸಂಪರ್ಕಿಸುವಂತೆ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Tags: