ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು
ಮಡಿಕೇರಿ: ಕೇರಳ ಮೂಲದ ಆರೋಪಿಗಳ ಸಹಕಾರದೊಂದಿಗೆ ನಕಲಿ ಚಿನ್ನಾಭರಣಗಳನ್ನು ಅಡಮಾನ ಮಾಡಿ ವಿವಿಧ ಬ್ಯಾಂಕ್‌ಗಳಲ್ಲಿ ಬರೋಬ್ಬರಿ ೩೪ ಲಕ್ಷ ರೂ. ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಕೇರಳ ಮೂಲದ ಆರೋಪಿ ಸೇರಿದಂತೆ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೇರಳ ಮಲಪುರಂ ಜಿಲ್ಲೆಯ ನವಾಸ್ ಕೆ.ಪಿ.(೪೭) ಎರ್ನಾಕುಲಂ ಜಿಲ್ಲೆಯ ನಿಶಾದ್ ಕೆ.ಎ.(೪೩), ಮಹಮ್ಮದ್ ಕುಂಞ ಸಿ.ಎಂ.(೪೮), ಪ್ರದೀಪ್ ಪಿ.ಜೆ.(೬೦), ಕಕ್ಕಬ್ಬೆ ಕುಂಜಿಲ ಗ್ರಾಮದ ಮೊಹಮ್ಮದ್ ರಿಜ್ವಾನ್.ಕೆ.ಎ.(೩೫), ಅಬ್ದುಲ್ ನಾಸೀರ್(೫೦), ನಾಪೋಕ್ಲು ಎಮ್ಮೆಮಾಡು ಗ್ರಾಮದ ರಿಯಾಜ್ ಪಿ.ಹೆಚ್.(೩೯), ಮೂಸಾ ಬಿ.ಎ. (೩೭), ಮಹಮ್ಮದ್ ಹನೀಫ್ ಎಂ.ಎA.(೪೨), ಖತೀಜಾ(೩೨), ಭಾಗಮಂಡಲ ಅಯ್ಯಂಗೇರಿ ಗ್ರಾಮದ ರಫೀಕ್(೩೮), ಫಾರಾನ್(೩೩) ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹಂಸ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
೨೨೩ ಗ್ರಾಂ ತೂಕದ ಚಿನ್ನ ಲೇಪಿತ ೨೮ ಬಳೆಗಳು, ೨ ಲಕ್ಷ ನಗದು, ಬ್ಯಾಂಕ್ ಖಾತೆ ಫ್ರೀಜ್ ಮೊತ್ತ ೨,೦೮,೨೨೧ ರೂ., ವಿಮೆ ಮೇಲೆ ಹಣ ಹೂಡಿಕೆ ರೂ. ೧,೨೬,೫೦೪ ರೂ., ೧,೪೦,೦೦೦ ರೂ. ಮೌಲ್ಯದ ಒಂದು ಐಫೋನ್ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಸಂಬಂಧ ಮಾಹಿತಿ ನೀಡಿದ ಎಸ್‌ಪಿ ಕೆ. ರಾಮರಾಜನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ನಿ. (ಕೆಡಿಸಿಸಿ) ಮಡಿಕೇರಿ ಮುಖ್ಯ ಶಾಖೆಯಲ್ಲಿ ಡಿ.೪ರಂದು ಮೊಹಮ್ಮದ್ ರಿಜ್ವಾನ್ ಕೆ.ಎ. ೦೮ ಚಿನ್ನದ ಬಳೆಗಳನ್ನು ಅಡಮಾನ ಇಡಲು ಪ್ರಯತ್ನಿಸಿದ್ದರು. ಈ ಸಂದರ್ಭ ಆಭರಣವನ್ನು ಪರಿಶೀಲಿಸಿದಾಗ ನಕಲಿ ಆಭರಣ ಎಂದು ತಿಳಿದುಬಂದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ತನಿಖೆ ಸಂದರ್ಭ ಎಮ್ಮೆಮಾಡು ನಿವಾಸಿಗಳಾದ ರಿಯಾಜ್, ಖತೀಜಾ, ಮಹಮ್ಮದ್ ಅನೀಫ್, ಕುಂಜಿಲ ಗ್ರಾಮದ ನಿವಾಸಿಗಳಾದ ಅಬ್ದುಲ್ ನಾಸೀರ್, ಮೂಸಾ, ಹಂಸ ಎಂಬವರು ಮಡಿಕೇರಿ, ಭಾಗಮಂಡಲ, ವಿರಾಜಪೇಟೆ, ಕಡಂಗಗಳಲ್ಲಿನ ಕೆಡಿಸಿಸಿ ಬ್ಯಾಂಕ್, ಮಡಿಕೇರಿಯ ಮುತ್ತೂಟ್ ಫಿನ್ ಕಾರ್ಪ್ ಮತ್ತು ಭಾಗಮಂಡಲದ ವಿಎಸ್‌ಎಸ್‌ಎನ್ ಬ್ಯಾಂಕ್‌ಗಳಲ್ಲಿ ಒಟ್ಟು ೬೨೫ ಗ್ರಾಂ ತೂಕದ ನಕಲಿ ಚಿನ್ನಾಭರಣಗಳನ್ನು ಅಡಮಾನ ಮಾಡಿ ಒಟ್ಟು ರೂ.೩೪,೯೫,೦೧೬ ಹಣವನ್ನು ಸಾಲವಾಗಿ ಪಡೆದಿರುವುದು ಕಂಡುಬAದಿದೆ. ಪ್ರಕರಣದ ವಿಚಾರಣೆ ಸಂದರ್ಭ ಕೇರಳ ರಾಜ್ಯ ಮಲ್ಲಪುರಂ ಜಿಲ್ಲೆ ನಿವಾಸಿ ನವಾಜ್ ಎಂಬಾತನು ನಕಲಿ ಚಿನ್ನವನ್ನು ನೀಡಿರುವುದು ಕಂಡುಬAದಿದೆ ಎಂದು ಮಾಹಿತಿ ನೀಡಿದರು.
ಮುಂದಿನ ತನಿಖೆಯಲ್ಲಿ ಈ ಕೃತ್ಯದ ಮಾಸ್ಟರ್ ಮೈಂಡ್ ಕೇರಳ ರಾಜ್ಯದ ಎರ್ನಕುಲಂ ಜಿಲ್ಲೆಯ ಮೊಹಮ್ಮದ್ ಕುಂಞ ಅಕ್ಕಸಾಲಿಗ ವೃತ್ತಿ ಮಾಡಿಕೊಂಡು ಕೃತ್ಯವೆಸಗಿರುವುದು ದೃಢಪಟ್ಟಿದೆ. ಈತನು ಪ್ರದೀಪ್ ಎಂಬಾತನಿಗೆ ಹಣವನ್ನು ನೀಡಿ ನಕಲಿ ಚಿನ್ನ ಲೇಪಿತ ಆಭರಣಗಳನ್ನು ತಯಾರಿಸಿರುವುದು ದರಢಪಟ್ಟಿದೆೆ. ಅಲ್ಲದೆ, ಮಾಸ್ಟರ್ ಮೈಂಡ್ ಮೊಹಮ್ಮದ್ ಕುಂಞ ಈತನಿಂದ ಮಧ್ಯವರ್ತಿಯಾದ ನಿಶಾದ್ ಎಂಬಾತನು ನಕಲಿ ಚಿನ್ನವನ್ನು ಪಡೆದು ನವಾಜ್ ಎಂಬಾತನಿಗೆ ನೀಡಿರುವುದು ಕೂಡ ತನಿಖೆ ವೇಳೆಯಲ್ಲಿ ತಿಳಿದು ಬಂದಿದೆ ಎಂದರು.
ಪ್ರದೀಪ್ ಮೇಲೆ ೨೦೨೪ನೇ ಸಾಲಿನಲ್ಲಿ ೩ ಪ್ರಕರಣಗಳು ಸೇರಿದಂತೆ ಒಟ್ಟು ೧೫ ಪ್ರಕರಣಗಳು ದಾಖಲಾಗಿದೆ. ನಿಶಾದ್ ಮೇಲೆ ೧ ದರೋಡೆ ಪ್ರಕರಣ ಸೇರಿದಂತೆ ಒಟ್ಟು ೪ ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣದ ಆರೋಪಿಗಳು ವಿಚಾರಣಾಧಿಕಾರಿಗಳ ಅಧಿಕಾರ ವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಂಡು ವಿಚಾರಣೆ ಮುಗಿಯುವ ವೇಳೆಯಲ್ಲಿ ಜಾಮೀನಿನ ಮೇಲೆ ಹೊರಗೆ ಬಂದು ಪುನಃ ಇದೇ ರೀತಿಯ ಕೃತ್ಯದಲ್ಲಿ ತೊಡಗಿರುವುದು ವಿಚಾರಣೆಯಲ್ಲಿ ತಿಳಿದುಬಂದಿರುತ್ತದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆಯ ಕಲಂ: ೧೧೧ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ಸದರಿ ಆರೋಪಿಗಳಿಗೆ ಕಲಂ ೧೧೧ ಬಿಎನ್‌ಎಸ್ ಆಕ್ಟ್ ಅಡಿಯಲ್ಲಿ ಕನಿಷ್ಠ ೦೫ ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿರುತ್ತದೆ. ಇಂತಹ ಕೃತ್ಯ ನಡೆಸಿದ ಆರೋಪಿಗಳಿಗೆ ಜಾಮೀನು ನೀಡದಂತೆ ಘನ ನ್ಯಾಯಾಲಯಕ್ಕೆ ಆಕ್ಷೇಪಣೆಯನ್ನು ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಡಿಕೇರಿ ನಗರ, ವಿರಾಜಪೇಟೆ ನಗರ, ಭಾಗಮಂಡಲ ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು ೦೮ ಪ್ರತ್ಯೇಕ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ವಿಶೇಷ ತನಿಖಾ ತಂಡ ಪತ್ತೆಹಚ್ಚಿದ್ದು, ಇವರ ಕಾರ್ಯವನ್ನು ಶ್ಲಾಘಿಸುವುದಾಗಿ ಇದೇ ಸಂದರ್ಭ ತಿಳಿಸಿದರು.
ಮಡಿಕೇರಿ ಉಪವಿಭಾಗ ಡಿಎಸ್‌ಪಿ ಮಹೇಶ್ ಕುಮಾರ್, ಸೆನ್ ಪೊಲೀಸ್ ಠಾಣೆ ಡಿಎಪಿ ರವಿ, ಮಡಿಕೇರಿ ನಗರ ವೃತ್ತ ಸಿಪಿಐ ರಾಜು ಪಿ.ಕೆ., ಮಡಿಕೇರಿ ಗ್ರಾಮಾಂತರ ವೃತ್ತ ಸಿಪಿಐ ಅನೂಪ್ ಮಾದಪ್ಪ ಪಿ, ಡಿಸಿಆರ್‌ಬಿ ಪಿಐ ಮೇದಪ್ಪ, ಮಡಿಕೇರಿ ನಗರ ಠಾಣಾ ಪಿಎಸ್‌ಐ ಲೊಕೇಶ್, ಭಾಗಮಂಡಲ ಠಾಣಾ ಪಿಎಸ್‌ಐ ಶೋಭಾ ಲಾಮಣಿ ಸೇರಿದಂತೆ ಉಪವಿಭಾಗ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳು ಡಿಸಿಆರ್‌ಬಿ ಮತ್ತು ತಾಂತ್ರಿಕ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.