Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಖಾಸಗಿ ದರ್ಬಾರಿಗೆ ಅಂಬಾವಿಲಾಸ ಅರಮನೆ ಸಜ್ಜು

ನವರಾತ್ರಿ ಪ್ರಯುಕ್ತ ಅರಮನೆಯಲ್ಲಿ ಹಲವು ಧಾರ್ಮಿಕ ಕಾರ್ಯ;
ಯದುವೀರ್‌ಗೆ ೮ನೇ ವರ್ಷದ ದರ್ಬಾರ್ ಸಂಭ್ರಮ

ಕೆ.ಬಿ.ರಮೇಶನಾಯಕ

ಮೈಸೂರು: ಯದುವಂಶದವರು ಅರಮನೆಯಲ್ಲಿ ಶರನ್ನವರಾತ್ರಿಯ ವೇಳೆ ನಡೆಸಿಕೊಂಡು ಬಂದಿರುವ ಖಾಸಗಿ ದರ್ಬಾರ್‌ಗೆ ಅರಮನೆ ಸಜ್ಜಾಗಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಇದು ಎಂಟನೇ ವರ್ಷದ ದರ್ಬಾರ್ ಆಗಿದೆ.
ಅರಮನೆಯಲ್ಲಿ ನವರಾತ್ರಿಯಲ್ಲಿ ನಡೆಯುವ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳು ೧೦ ದಿನಗಳ ಕಾಲ ನಡೆಯಲಿವೆ. ನವರಾತ್ರಿ ಮೊದಲ ದಿನವಾದ ಸೆ.೨೫ರಂದು ಸೋಮವಾರ ಮುಂಜಾನೆ ೫.೧೦ರಿಂದ ೫.೩೦ರೊಳಗೆ ದರ್ಬಾರ್ ಹಾಲ್‌ನಲ್ಲಿ ಜೋಡಿಸಲಾಗಿರುವ ಸಿಂಹಾಸನಕ್ಕೆ ‘ಸಿಂಹ’ ಜೋಡಣಾ ಕಾರ್ಯ ನಡೆಯಲಿದೆ. ಬೆಳಿಗ್ಗೆ ೮.೦೫ರಿಂದ ೮.೫೫ರವರೆಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಚಾಮುಂಡಿತೊಟ್ಟಿಯಲ್ಲಿ ಕಂಕಣ ಧಾರಣೆ ಮಾಡಲಾಗುತ್ತದೆ. ಬಳಿಕ ಚಾಮುಂಡಿತೊಟ್ಟಿಯಿಂದ ವಾಣಿವಿಲಾಸ ದೇವರ ಮನೆಗೆ ಕಂಕಣವನ್ನು ತಂದು ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಲಾಗುತ್ತದೆ. ೯.೩೦ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಸವಾರಿ ತೊಟ್ಟಿಗೆ ಆಗಮಿಸಲಿದೆ. ೯.೫೦ರಿಂದ ೧೦.೩೫ರೊಳಗೆ ಕಳಸ ಪೂಜೆ ಹಾಗೂ ಸಿಂಹಾರೋಹಣ ನೆರವೇರಲಿದೆ. ಬಳಿಕ ಖಾಸಗಿ ದರ್ಬಾರ್ ಜರುಗಲಿದೆ. ದರ್ಬಾರ್ ಮುಗಿದ ಬಳಿಕ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿದೇವಿ, ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ, ಕೋಡಿ ಸೋಮೇಶ್ವರ, ಕೋಟೆ ಆಂಜನೇಯಸ್ವಾಮಿ, ಗಣೇಶ ದೇವಾಲಯ, ಕೃಷ್ಣನ ದೇವಾಲಯ ಸೇರಿದಂತೆ ೩೩ ದೇವಾಲಯಗಳಿಂದ ತಂದ ಪ್ರಸಾದ ಸೇವಿಸಿದ ನಂತರ ದರ್ಬಾರ್ ಅಂತಿಮಗೊಳ್ಳಲಿದೆ. ಈ ವೇಳೆ ಅರಮನೆಯ ಬ್ಯಾಂಡ್ ವಾದನದ ತಂಡ ‘ಕಾೋಂ ಶ್ರೀ ಗೌರಿ’ ಗೀತೆಯನ್ನು ನುಡಿಸಲಿದ್ದಾರೆ.
ಸಾರ್ವಜನಿಕರಿಗೆ ನಿಷೇಧ: ಸೋಮವಾರ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧.೩೦ರವರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಯುಧ ಪೂಜೆ ದಿನವಾದ ಅ.೪ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೨.೩೦ರವರೆಗೆ ಹಾಗೂ ವಿಜಯದಶಮಿ ದಿನವಾದ ಅ.೫ರಂದು ದಿನವಿಡೀ ಅರಮನೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ವಿಜಯದಶಮಿ ದಿನ ವಿಜಯಯಾತ್ರೆ: ಅ.೫ರಂದು ಬೆಳಿಗ್ಗೆ ೧೧ಕ್ಕೆ ಆನೆಬಾಗಿಲು ಬಳಿ ಪಟ್ಟದ ಆನೆ, ಹಸು, ಕುದುರೆ ಆಗಮಿಸಲಿದ್ದು, ೧೨.೧೦ಕ್ಕೆ ಆಯುಧಗಳನ್ನು ಉತ್ತರಪೂಜೆ ನಂತರ ಶ್ರೀ ಜೈಭುವನೇಶ್ವರಿ ದೇವಸ್ಥಾನಕ್ಕೆ ಕೊಂಡೊಯ್ಯಲಾಗುವುದು. ಈ ವೇಳೆ ವಿಜಯಯಾತ್ರೆ ಶಮೀ ವೃಕ್ಷದ ಶಮೀಪೂಜೆ ನಡೆಯಲಿದೆ. ವಿಜಯಯಾತ್ರೆ ನಂತರ ಶ್ರೀಚಾಮುಂಡೇಶ್ವರಿ ದೇವಿ ಅಮ್ಮನವರನ್ನು ಕನ್ನಡಿ ತೊಟ್ಟಿಯಲ್ಲಿ ಬಿಜಯಂಗೈಸಲಾಗುವುದು.
ಅ.೨೦ರಂದು ಸಿಂಹಾಸನ ಹಾಗೂ ಭದ್ರಾಸನ ಬಿಡಿ ಭಾಗಗಳಾಗಿ ವಿಂಗಡಿಸಲಾಗುತ್ತದೆ. ನಂತರ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್‌ಗೆ ಕೊಂಡೊಯ್ದು ಸುರಕ್ಷಿತವಾಗಿಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಅಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ ಗಂಟೆವರೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿಸಲಾಗುತ್ತದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ