ಸೂಕ್ತ ರಸ್ತೆ ನಿರ್ಮಾಣವಾಗದೆ ಕೆಸರಿನಲ್ಲಿಯೇ ಶಾಲೆಗೆ ತೆರಳುವ ಮಕ್ಕಳು; ರಸ್ತೆ ದುರಸ್ತಿಗೆ ಆಗ್ರಹ
ಶಂಕರ ಎಚ್.ಎಸ್.
ಮೈಸೂರು: ವಿಜಯನಗರ ೩ನೇ ಹಂತದ ‘ಸಿ’ ಬ್ಲಾಕ್‌ನಲ್ಲಿರುವ ಯೂರೋ ಶಾಲೆ ಮುಂಭಾಗದ ರಸ್ತೆ ಕಳೆದ ಒಂದು ವಾರದಿಂದ ರಾತ್ರಿ ಸುರಿದ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದ್ದು, ಮಕ್ಕಳು ಕೆಸರಿನಲ್ಲಿಯೇ ಶಾಲೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದು ತಿಂಗಳ ಹಿಂದೆ ಒಳಚರಂಡಿ ಕಾಮಗಾರಿಗಳಿಗಾಗಿ ಅಗೆದಿದ್ದ ಮಣ್ಣನ್ನು ಡಾಂಬರು ರಸ್ತೆುಂಲ್ಲಿಯೇ ಹಾಕಿರುವುದರಿಂದ ಕೆಸರು ಗದ್ದೆಯಂತಾದ ರಸ್ತೆಯಲ್ಲೇ ಪೋಷ ಕರು ಮಕ್ಕಳನ್ನು ಶಾಲೆಗೆ ಕರೆದು ಹೋಗಿ ಬಿಡುತ್ತಿದ್ದಾರೆ. ಆ ಕೆಸರಿನಲ್ಲಿ ಸಂಚರಿಸುವಾಗ ಬಹಳಷ್ಟು ಜನ ಕಾಲು ಜಾರಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ.
ಸೊಳ್ಳೆಗಳ ಕಾಟ: ಶಾಲೆಯ ಪಕ್ಕದಲ್ಲೇ ಚರಂಡಿ ಹಾದು ಹೋಗಿದ್ದು, ಮಣ್ಣು, ತ್ಯಾಜ್ಯ ಚರಂಡಿಯಲ್ಲಿ ಶೇಖರಣೆಯಾಗಿ ನೀರು ಸರಾಗವಾಗಿ ಹರಿಯದೆ ಸೊಳ್ಳೆಗಳ ತಾಣ ವಾಗಿ ಮಾರ್ಪಟ್ಟಿದೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದ್ದು, ಸೊಳ್ಳೆಗಳ ಕಾಟದಿಂದ ಸಣ್ಣ ಮಕ್ಕಳು ಶಾಲೆಯಲ್ಲಿ ಕುಳಿತು ಪಾಠ ಕೇಳಲು ಕಿರಿಕಿರಿ ಅನುಭವಿಸುವಂತಾಗಿದೆ.
ವಿಜಯನಗರ ೧ನೇ ಹಂತದ ಬಸವ ಸಮಿತಿಯ ಪಕ್ಕದ ರಸ್ತೆ ಮಳೆಗೆ ಅದ್ವಾನಗೊಂಡಿರುವುದು ಮತ್ತು ರಸ್ತೆಯಲ್ಲೇ ಕಟ್ಟಡದ ತ್ಯಾಜ್ಯ ಸುರಿದಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆಯಿಂದಾಗಿ ರಸ್ತೆ ಅಧ್ವಾನವಾಗಿರುವುದರಿಂದ ನಮ್ಮ ಶಾಲೆಯ ಮಕ್ಕಳು ನಡೆದುಕೊಂಡು ಬರಲು ಬಹಳ ತೊಂದರೆಯಾಗುತ್ತಿದೆ. ನಗರಪಾಲಿಕೆಯವರು ಆದಾಷ್ಟು ಬೇಗ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
-ಪ್ರೇಮಲತಾ, ಪ್ರಾಂಶುಪಾಲರು.





