ಚಾಮರಾಜನಗರ: ತಾಲ್ಲೂಕಿನ ಕಟ್ನವಾಡಿ ಗ್ರಾಮದ ಗುರು ಎಂಬುವವರ ಕಬ್ಬಿನ ಗದ್ದೆಯಲ್ಲಿ 2 ಚಿರತೆ ಮರಿಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಭಾನುವಾರ ಸಂಜೆ ಕಬ್ಬಿನ ಗದ್ದೆಯೊಳಗೆ ಮರಿಗಳು ಪತ್ತೆಯಾದ ವಿಷಯವನ್ನು ಗುರು ಅವರು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿ ವಲಯಾರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ತೆರಳಿದ ಕೆ.ಗುಡಿ ವಲಯಾರಣ್ಯಾಧಿಕಾರಿ ವಿನೋದ್ ಗೌಡ, ಉಪ ವಲಯಾರಣ್ಯಾಧಿಕಾರಿ ಅಮರನಾಥ್ ಹಾಗೂ ಇತರರು ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ.
15 ದಿನಗಳ ಮರಿಗಳಾಗಿದ್ದು, ಅವು ದೊರೆತ ಸ್ಥಳದಲ್ಲಿಯೇ ಟ್ರೇನಲ್ಲಿಟ್ಟು ತಾಯಿ ಚಿರತೆಯ ಬರುವಿಕೆಗಾಗಿ ಕಾಯಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ತಾಯಿ ಚಿರತೆ ಮರಿಗಳನ್ನು ಹುಡುಕಿಕೊಂಡು
ಬಾರದಿದ್ದರೆ ಬೆಳಗ್ಗೆ ಮರಿಗಳನ್ನು ಎಲ್ಲಿಗೆ ಸಾಗಿಸಿ ಆರೈಕೆ ಮಾಡಬೇಕೆಂದು ಹಿರಿಯ ಅರಣ್ಯಾಧಿಕಾರಿಗಳ ಸಲಹೆ ಪಡೆಯಲಾಗುವುದು ಎಂದು ವಿನೋದ್ ಗೌಡ ಅವರು ತಿಳಿಸಿದ್ದಾರೆ.





