ಮಡಿಕೇರಿ: ಕನ್ನಡ ಭಾಷೆ ನಮ್ಮ ರಾಜ್ಯದ ನಮ್ಮೆಲ್ಲರ ಆತ್ಮಗೌರವದ ಹೆಮ್ಮೆಯ ಪ್ರತೀಕ. ಕನ್ನಡ ಎಂಬುದು ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಲೇಖಕರಾದ ಡಾ.ಕವಿತಾ ರೈ ತಿಳಿಸಿದರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಲವಾರು ಭಾಷೆಗಳನ್ನು ಮಾತನಾಡುವವರು ಇದ್ದಾರೆ. ಆದರೆ, ಬೇರೆ ಭಾಷೆಯವರಿಗಿರುವ ಭಾಷಾಭಿಮಾನ ಕನ್ನಡಿಗರಲ್ಲಿ ಇಲ್ಲ. ಭಾಷೆಯ ಕುರಿತು ಮೊದಲು ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷೃಣಾಧಿಕಾರಿ ಡಾ.ಬಿ.ಸಿ.ಸಿದ್ದೇಗೌಡ ಮಾತನಾಡಿ, ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಸಮೃದ್ಧ ಪರಂಪರೆ ಇದೆ. ಜಗತ್ತಿನ ಲ್ಲಿರುವ ಸುಮಾರು ಆರು ಸಾವಿರ ಭಾಷೆಗಳಲ್ಲಿ ಕನ್ನಡ ವಿಶಿಷ್ಟವಾದ ಭಾಷೆ. ಕನ್ನಡ ನಾಡಿನಲ್ಲಿ ಪರಭಾಷಿಗರ ಸಂಖ್ಯೆ ಹೆಚ್ಚುತ್ತಿದ್ದು, ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೇಸರಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಡಿ.ಕೆ.ಉಷಾ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ.ಸಿ.ಡಾ.ದಯಾನಂದ ಕಾರ್ಯಕ್ರಮದ ಅಧ್ಯಕ್ಷೃತೆ ವಹಿಸಿದ್ದರು. ಲಯನ್ಸ್ ಸಂಸ್ಥೆ ಅಧ್ಯಕ್ಷೃ ಪಿ.ಟಿ.ನರೇಂದ್ರ, ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್.ರಘುರಾಜು ಹಾಜರಿದ್ದರು. ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.





