ಮೈಸೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಾತ್ರ ಜೆಡಿಎಸ್ ಹಾಗೂ ಬಿಜೆಪಿಯು ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಯ ತತ್ವ ಸಿದ್ಧಾಂತವೇ ಬೇರೆ, ನಮ್ಮ ತತ್ವ ಸಿದ್ಧಾಂತವೇ ಬೇರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಫೆ.7 ರಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದಷ್ಟೇ ಬಿಜೆಪಿಯೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಹೊರತು ಬಿಜೆಪಿಯ ತತ್ವ ಸಿದ್ಧಾಂತಗಳು ಹಾಗೂ ನಮ್ಮ ಪಕ್ಷದ ಸಿದ್ಧಾಂತಗಳು ಬೇರೆ ಬೇರೆ, ಎರಡೂ ಪಕ್ಷಗಳ ಸಿದ್ದಾಂತಗಳು ಎಂದಿಗೂ ಒಂದಾಗಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷವಾಗಿದೆ. ಅದನ್ನು ಹೆಚ್.ಡಿ.ದೇವೇಗೌಡರು ಬೆಳೆಸಿ ಉಳಿಸಿಕೊಂಡಿದ್ದು ಹೋಗಿದ್ದು ಅವರ ಹಾದಿಯಲ್ಲಿ ನಮ್ಮ ಪಕ್ಷದವರೆಲ್ಲರೂ ಸಾಗುತ್ತೇವೆ. ಅದನ್ನು ಹೊರತುಪಡಿಸಿ ನಮ್ಮ ಪಕ್ಷದ ಸಿದ್ಧಾಂತದಲ್ಲಿ ಒಂದಿಷ್ಟೂ ಬದಲಾವಣೆಯಾಗಲು ಸಾಧ್ಯವಿಲ್ಲ. ನಮ್ಮದು ನಮಗೆ, ಬಿಜೆಪಿ ಪಕ್ಷದ ಸಿದ್ಧಾಂತ ಅವರಿಗೆ ರಾಜ್ಯದಲ್ಲಿ ಕೇವಲ ಸೀಟು ಹಂಚಿಕೆಗಾಗಿ ಮಾತ್ರ ಮೈತ್ರಿ ನಡೆದಿದೆ ಎಂದು ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಸ್ಪಷ್ಟಪಡಿಸಿದ್ದಾರೆ.