ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಡಿ.30ರಂದು ನಗರದಲ್ಲಿ ಜನಸಂಕಲ್ಪಯಾತ್ರೆ ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಎಂಟತ್ತು ದಿನಗಳ ಹಿಂದೆ ಮದ್ದೂರು ಮತ್ತು ಪಾಂಡವಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮೊದಲ ಹಂತದ ಜನಸಂಕಲ್ಪ ಯಾತ್ರೆ ನಡೆದಿತ್ತು. ಇದೀಗ 2ನೇ ಹಂತದ ಯಾತ್ರೆಗೆ ಅಮಿತ್ ಶಾ ಅವರೇ ಆಗಮಿಸುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ನಗರದ ವಿಶ್ವವಿದ್ಯಾನಿಲಯದ ಆವರಣದಲ್ಲಿ ಅಂದು ಮಧ್ಯಾಹ್ನ 1 ಗಂಟೆಗೆ ಆರಂಭಗೊಳ್ಳಲಿರುವ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು, ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ ಸೇರಿದಂತೆ ಸಂಪುಟದ ಹಲವು ಸಚಿವರು ಆಗಮಿಸುವರು ಎಂದು ತಿಳಿಸಿದರು.
ಒಂದು ಲಕ್ಷಕ್ಕೂ ಹೆಚ್ಚು ಮಂದಿ ಬಿಜೆಪಿ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಹಳೇ ಮೈಸೂರು ಭಾಗದ ಎಲ್ಲ ಜಿಲ್ಲೆಗಳಿಂದಲೂ ಪಕ್ಷದ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸುವರು. ಯಾತ್ರೆಯನ್ನು ಯಶಸ್ವಿಗೊಳಿಸಲು ಬಿಜೆಪಿ ವಿವಿಧ ಮೋರ್ಚಾಗಳು, ಮಂಡಲಗಳ ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ಜನಸಂಕಲ್ಪ ಯಾತ್ರೆಯ ಜತೆಗೆ ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಮನ್‌ಮುಲ್ ಆವರಣದಲ್ಲಿ ನಿರ್ಮಿಸಿರುವ ಮೆಗಾ ಡೇರಿಯನ್ನು ಕೇಂದ್ರದ ಸಹಕಾರ ಸಚಿವ ಅಮಿತ್ ಶಾ ಅವರು ಲೋಕಾರ್ಪಣೆ ಮಾಡುವರು. ಇದಕ್ಕೂ ಎಲ್ಲ ತಯಾರಿ ನಡೆಯುತ್ತಿದೆ ಎಂದು ಹೇಳಿದರು





