Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ದೇಶಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ : ಸುತ್ತೂರು ಶ್ರೀ ಕಳವಳ

ಮೈಸೂರು: ಭಾರತದಂತಹ ದೇಶಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಬಹಳ ಆತಂಕಕಾರಿ ವಿಚಾರ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ನಗರದ ಕಲಾಮಂದಿರದಲ್ಲಿ ಅಖಿಲ ಭಾರತ ಹಿರಿಯ ನಾಗರಿಕರ ಒಕ್ಕೂಟ ವತಿಯಿಂದ ಆಯೋಜಿಸಿದ್ದ ೨೦ ನೇ ರಾಷ್ಟ್ರೀಯ ಹಿರಿಯ ನಾಗರಿಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ಹಣ ಇದೆ ಎಂದ ಮಾತ್ರಕ್ಕೆ ತಮ್ಮ ವಯಸ್ಸಾದ ಪೋಷಕರನ್ನು ವೃದ್ಧಾಶ್ರಮಳಿಗೆ ಸೇರಿಸುತ್ತಾರೆ. ನಿಜ ಹೇಳಬೇಕಂದರೆ, ವಯಸ್ಸಾದ ಹಿರಿಯ ಜೀವಗಳಿಗೆ ಬೇಕಿರುವುದು ತಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಪ್ರೀತಿ ಮತ್ತು ವಾತ್ಸಲ್ಯ ಹೊರತು ದೂರಿಂದ ಕಳುಹಿಸುವ ಹಣವಲ್ಲ ಎಂದು ಹೇಳಿದರು.

ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ ಅಷ್ಟೇ. ಉತ್ಸಾಹಕ್ಕೆ ವಯಸ್ಸಿನ ಅಂತರವಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಉತ್ಸಾಹ ಬಹಳ ಮುಖ್ಯ. ಭಾರತದಂದತಹ ದೇಶದಲ್ಲಿ ಜನಸಂಖ್ಯೆಯ ಕಾರಣದಿಂದ ಮಾತ್ರ ನಿವೃತ್ತಿ ಎಂಬ ಪದ ಹೆಚ್ಚು ಚಾಲ್ತಿಯಲ್ಲಿದೆ. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ನಿವೃತ್ತಿಗೆ ವಯಸ್ಸಿನ ಗಡಿಯಿಲ್ಲ. ಎಲ್ಲಿಯವರೆಗೆ ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಾನೋ ಅಲ್ಲಿಯ ವರೆಗೆ ಆತ ಸೇವೆಯಲ್ಲಿ ಮುಂದುವರಿಯುತ್ತಾನೆ ಎಂದು ಹೇಳಿದರು.

ಕಿರಿಯರಿಗೆ ಹಿರಿಯರ ಮಾರ್ಗದರ್ಶನ ಬಹಳ ಮುಖ್ಯ. ಆದ್ದರಿಂದ ಇಂದಿನ ತೆಲೆಮಾರಿನ ಯುವಕರು ತಮ್ಮ ಮನೆಯಲ್ಲಿರುವ ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಬಹಳ ಮುಖ್ಯ. ಅವರ ನೀಡುವ ಸಲಹೆಗಳನ್ನು ಪಡೆದುಕೊಂಡು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ. ಹಾಗಾಗಿ ಸಧೃಡ ಆರೋಗ್ಯ ಕಾಪಾಡಿಕೊಳ್ಳುವತ್ತ ಹಿರಿಯರು ಹೆಚ್ಚಿನ ಗಮನ ಹರಿಸಬೇಕು.ಜೀವನ ಶೈಲಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡರೆ ಔಷದಿ ತೆಗೆದುಕೊಳ್ಳದ ರೀತಿಯಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಸದಾ ಧನಾತ್ಮಕ ಆಲೋಚನೆಗಳೊಂದಿಗೆ ನಿಮಗೆ ಸರಿಹೊಂದುವಂತಹ ವ್ಯಾಯಾಮ ಹಾಗೂ ವಾಯುವಿಹಾರ ಮಾಡಿಕೊಂಡು ಸದಾ ಹಸನ್ಮುಖಿಗಳಾಗಿರಬೇಕು ಎಂದು ಸಲಹೆ ನೀಡಿದರು.

ಮೈಸೂರು ನಗರವನ್ನು ನಿವೃತ್ತರಿಗೆ ಸೂಕ್ತ ಸ್ಥಳ ಎಂದು ಹೇಳಲಾಗುತ್ತದೆ. ಇಲ್ಲಿ ಯಾವುದೇ ರೀತಿಯ ಅಶಾಂತಿಯುಂಟು ಮಾಡುವ ಘಟನೆಗಳು ಹೆಚ್ಚು ಸಂಭವಿಸುವುದಿಲ್ಲ. ಅಂತಹ ಸ್ಥಳದಲ್ಲಿ ರಾಷ್ಟ್ರ ಮಟ್ಟದ ಸಮ್ಮೇಳನ ಆಯೋಜಿಸಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಸಮ್ಮೇಳನದ ಮುಖ್ಯ ಅತಿಥಿ ಡಾ.ರವಿ ಪಾಟೀಲ್ ಮಾತನಾಡಿ, ಹಿರಿಯ ಮಾರ್ಗದರ್ಶನ ಮತ್ತು ಪೋಷಕರ ಬೆಂಬದಿಂದ ನಾನೂ ವೈದ್ಯನಾಗಲು ಸಾಧ್ಯವಾಯಿತು. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಎಷ್ಟು ಮುಖ್ಯವೂ, ಹಿರಿಯ ಅನುಭವಿ ನಾಗರಿಕರ ಸಲಹೆಯು ಅಷ್ಟೇ ಮುಖ್ಯ. ಆದ್ದರಿಂದ ನಮ್ಮ ಸರ್ಕಾರ ಯುವಜನರಿಗೆ ನೀಡುವಷ್ಟು ಆದ್ಯತೆಯನ್ನು ಹಿರಿಯರಿಗೂ ನೀಡಬೇಕು. ಅವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ನಿವೃತ್ತ ರೈಲ್ವೆ ಉದ್ಯೋಗಿ ರಾಮಣ್ಣ ಅವರಿಗೆ ಸುತ್ತೂರು ಶ್ರೀಗಳಿಂದ ಸನ್ಮಾನ ಮಾಡಿ ಗೌರವಿಸಲಾಯಿತು. ಸಮ್ಮೇಳನದ ರಾಷ್ಟ್ರೀಯ ಅಧ್ಯಕ್ಷ ವಿಶ್ವಾಸ್ ರಾವ್ ಬದಾನೆ, ಒಕ್ಕೂಟದ ಅಧ್ಯಕ್ಷ ಡಿ.ರವೀಂದ್ರನಾಥ್, ಕಾರ್ಯಕ್ರಮ ಸಂಯೋಜಕ ಎನ್.ಹೊಬಯ್ಯ, ಉಪಾಧ್ಯಕ್ಷ ಮಾಲಪ್ಪ ಮುಡಕವಿ ಹಾಗೂ ಇತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ